ಸಾರಾಂಶ
ಆಕಾಶ್ ತಮ್ಮ ಕನಸನ್ನು ನನಸಾಗಿಸಿದ್ದರೂ ಅದಕ್ಕಾಗಿ ಹಲವು ಸಂಕಷ್ಟಗಳನ್ನು ಎದುರಿಸಿದ್ದಾರೆ. ಸ್ವತಃ ತಂದೆಯಿಂದಲೇ ಕ್ರಿಕೆಟ್‌ಗೆ ವಿರೋಧ ವ್ಯಕ್ತವಾಗಿತ್ತು. ಆದರೆ ತಾಯಿ ಬೆಂಬಲಕ್ಕೆ ನಿಂತರು. ಕುಟುಂಬ ನಿರ್ವಹಣೆಗಾಗಿ ಕೆಲಸ ಮಾಡುತ್ತಿರುವಾಗಲೂ ಕ್ರಿಕೆಟ್ ಬಿಡದ ಆಕಾಶ್ ಈಗ ಅದೇ ಕ್ರಿಕೆಟ್ ಕೈ ಹಿಡಿದಿದೆ.
ರಾಂಚಿ: ತಂದೆಯ ವಿರೋಧ, ಕುಟುಂಬದ ಆರ್ಥಿಕ ಸಂಕಷ್ಟ, ನೆರೆಹೊರೆಯವರ ತೆಗಳಿಕೆಯ ಮಾತುಗಳನ್ನೆಲ್ಲಾ ಎದುರಿಸಿ ನಿಂತ ಬಿಹಾರದ ರೋಹ್ಟಸ್ ಜಿಲ್ಲೆಯ ಬಡ್ಡಿ ಗ್ರಾಮದ ಆಕಾಶ್ ದೀಪ್, ಸದ್ಯ ಭಾರತದ ಪರ ಆಡುವ ತಮ್ಮ ಬಹುಕಾಲದ ಕನಸನ್ನು ನನಸಾಗಿಸಿದ್ದಾರೆ.ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಮೂಲಕ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಆಕಾಶ್, ತಮ್ಮ ಬದುಕಿನುದ್ದಕ್ಕೂ ಹಲವು ಸಂಕಷ್ಟಗಳನ್ನು ಎದುರಿದ್ದಾರೆ. ಆಕಾಶ್‌ರ ತಂದೆಗೆ ಆಕಾಶ್‌ನನ್ನು ಸರ್ಕಾರಿ ಅಧಿಕಾರಿಯಾಗಿ ನೋಡಬೇಕೆಂಬ ಆಸೆ. ಆದರೆ ಆಕಾಶ್‌ಗೆ ಕ್ರಿಕೆಟ್‌ನಲ್ಲಿ ಸಾಧನೆ ಮಾಡುವ ಹಂಬಲ. ಇದಕ್ಕೆ ಬೆಂಬಲವಾಗಿ ನಿಂತಿದ್ದು ಆಕಾಶ್‌ರ ಅಮ್ಮ. ತಂದೆಯ ವಿರೋಧದ ನಡುವೆಯೂ ಕ್ರಿಕೆಟ್ ಆಡಲು ಶುರು ಮಾಡಿದ ಆಕಾಶ್‌ಗೆ ಆರಂಭದಲ್ಲಿ ಸಾಕಷ್ಟು ಸಂಕಷ್ಟ ಅನುಭವಿಸುತ್ತಾರೆ.
ಆಕಾಶ್ ದೀಪ್ 2010ರಲ್ಲಿ ಪಶ್ಚಿಮ ಬಂಗಾಳದ ದುರ್ಗಾಪುರಕ್ಕೆ ಕೆಲಸ ಹುಡುಕಿಕೊಂಡು ಹೋಗಿದ್ದರು. ಕೆಲಸ ಮಾಡುತ್ತಲೇ ಸಮಯ ಸಿಕ್ಕಾಗಲೆಲ್ಲಾ ಕ್ರಿಕೆಟ್ ಆಡಿ ತಮ್ಮ ಕನಸಿನ ಬೆನ್ನು ಹತ್ತುತ್ತಾರೆ. ಆದರೆ 2015ರಲ್ಲಿ ಕೆಲವೇ ತಿಂಗಳ ಅಂತರದಲ್ಲಿ ತಂದೆ ಹಾಗೂ ಅಣ್ಣನನ್ನು ಕಳೆದುಕೊಂಡ ಆಕಾಶ್, ಇಡೀ ಕುಟುಂಬದ ಹೊಣೆ ಹೊರುತ್ತಾರೆ. ಇದಕ್ಕಾಗಿ 3 ವರ್ಷ ಕ್ರಿಕೆಟ್ ತೊರೆಯಬೇಕಾಗುತ್ತದೆ. ಆದರೆ ಕ್ರಿಕೆಟ್ ಆಸೆ ಬಿಡದ ಅವರು ಮತ್ತೆ ದುರ್ಗಾಪುರದ ಸ್ಥಳೀಯ ಕ್ಲಬ್ ಪರ ಆಡಿ ಮಿಂಚುತ್ತಾರೆ. ಬಳಿಕ ಬೆಂಗಾಳ್ ಅಂಡರ್-23 ಆಡಿದ ಅವರು, ರಣಜಿ ತಂಡಕ್ಕೂ ಸೇರ್ಪಡೆಗೊಳ್ಳುತ್ತಾರೆ. 2022ರಲ್ಲಿ ಐಪಿಎಲ್‌ನ ಆರ್‌ಸಿಬಿ ತಂಡಕ್ಕೆ ಆಯ್ಕೆಯಾಗಿ ಗಮನ ಸೆಳೆದ ಅವರು ಈಗ ಭಾರತ ತಂಡದ ಪರ ಆಡುವ ಅವಕಾಶ ಪಡೆದಿದ್ದಾರೆ.