ಲಖನೌಗೆ ತಲೆಬಾಗಿದ ಮುಂಬೈ ಮುಂಬೈ ವಿರುದ್ಧ ಲಖನೌಗೆ 12 ರನ್‌ ಗೆಲುವು । ಈ ಬಾರಿ ಟೂರ್ನಿಯಲ್ಲಿ 2ನೇ ಜಯ

| N/A | Published : Apr 05 2025, 04:14 AM IST

LSG vs MI Match Highlights
ಲಖನೌಗೆ ತಲೆಬಾಗಿದ ಮುಂಬೈ ಮುಂಬೈ ವಿರುದ್ಧ ಲಖನೌಗೆ 12 ರನ್‌ ಗೆಲುವು । ಈ ಬಾರಿ ಟೂರ್ನಿಯಲ್ಲಿ 2ನೇ ಜಯ
Share this Article
  • FB
  • TW
  • Linkdin
  • Email

ಸಾರಾಂಶ

ರನ್‌ ಹೊಳೆ ಹರಿದ ಶುಕ್ರವಾರದ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ 12 ರನ್‌ ವೀರೋಚಿತ ಸೋಲನುಭವಿಸಿದೆ. ಬೌಲಿಂಗ್‌ ಬಳಿಕ ಬ್ಯಾಟಿಂಗ್‌ನಲ್ಲೂ ಫೇಲಾದ ಮುಂಬೈ ಟೂರ್ನಿಯಲ್ಲಿ 3ನೇ ಸೋಲುಂಡಿತು. ರಿಷಭ್‌ ಪಂತ್‌ ನಾಯಕತ್ವದ ಲಖನೌ 4 ಪಂದ್ಯಗಳಲ್ಲಿ 2ನೇ ಗೆಲುವು ದಾಖಲಿಸಿತು.

 ಲಖನೌ: ರನ್‌ ಹೊಳೆ ಹರಿದ ಶುಕ್ರವಾರದ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ 12 ರನ್‌ ವೀರೋಚಿತ ಸೋಲನುಭವಿಸಿದೆ. ಬೌಲಿಂಗ್‌ ಬಳಿಕ ಬ್ಯಾಟಿಂಗ್‌ನಲ್ಲೂ ಫೇಲಾದ ಮುಂಬೈ ಟೂರ್ನಿಯಲ್ಲಿ 3ನೇ ಸೋಲುಂಡಿತು. ರಿಷಭ್‌ ಪಂತ್‌ ನಾಯಕತ್ವದ ಲಖನೌ 4 ಪಂದ್ಯಗಳಲ್ಲಿ 2ನೇ ಗೆಲುವು ದಾಖಲಿಸಿತು. 

ಮೊದಲು ಬ್ಯಾಟ್‌ ಮಾಡಿದ ಲಖನೌ 8 ವಿಕೆಟ್‌ಗೆ 203 ರನ್‌ ಗಳಿಸಿತು. ದೊಡ್ಡ ಗುರಿ ಬೆನ್ನತ್ತಿದ ಮುಂಬೈ 5 ವಿಕೆಟ್‌ಗೆ 191 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಆರಂಭಿಕರಾದ ವಿಲ್‌ ಜ್ಯಾಕ್ಸ್‌(5 ರನ್‌) ಹಾಗೂ ರಿಕೆಲ್ಟನ್(10) ವಿಫಲರಾದರು. ಆದರೆ ನಮನ್‌ ಧೀರ್‌ 24 ಎಸೆತಕ್ಕೆ 46 ರನ್‌ ಸಿಡಿಸಿದರು. ಮತ್ತೊಂದೆಡೆ ಸ್ಫೋಟಕ ಆಟವಾಡಿದ ಸೂರ್ಯಕುಮಾರ್ 43 ಎಸೆತಕ್ಕೆ 63 ರನ್‌ ಬಾರಿಸಿದರು.  

ಆದರೆ 17ನೇ ಓವರ್‌ನಲ್ಲಿ ಸೂರ್ಯ ಔಟಾಗುವುದರೊಂದಿಗೆ ತಂಡ ಸೋಲಿನ ಸುಳಿಗೆ ಸಿಲುಕಿತು. ಹಾರ್ದಿಕ್‌(28 ರನ್‌), ತಿಲಕ್‌ ವರ್ಮಾ(25 ರನ್)ಗೆ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. 2 ಓವರ್‌ಗೆ 29 ರನ್‌ ಬೇಕಿದ್ದಾಗ 19ನೇ ಓವರ್‌ನಲ್ಲಿ ಕೇವಲ 7 ರನ್‌ ನೀಡಿದ ಶಾರ್ದೂಲ್‌ ಲಖನೌಗೆ ಗೆಲುವು ತಂದುಕೊಟ್ಟರು. ಕೊನೆ ಓವರಲ್ಲಿ 22 ರನ್‌ ಬೇಕಿದ್ದಾಗ ಮುಂಬೈ ಸೋತಿತು.

ಮಾರ್ಷ್‌, ಮಾರ್ಕ್‌ರಮ್‌ ಅಬ್ಬರ:

ಲಖನೌಗೆ ಈ ಪಂದ್ಯದಲ್ಲೂ ಮಿಚೆಲ್‌ ಮಾರ್ಷ್ ಆಸರೆಯಾದರು. ಅವರ ಜೊತೆಗೆ ಏಡನ್‌ ಮಾರ್ಕ್‌ರಮ್‌ ಕೂಡಾ ಅಬ್ಬರಿಸಿದರು. ಪವರ್‌ಪ್ಲೇನಲ್ಲೇ ಅರ್ಧಶತಕ ಪೂರೈಸಿದ ಮಾರ್ಷ್‌, 31 ಎಸೆತಗಳಲ್ಲಿ 60 ರನ್‌ ಸಿಡಿಸಿದರು. ಮಾರ್ಕ್‌ರಮ್ 38 ಎಸೆತಕ್ಕೆ 53 ರನ್‌ ಬಾರಿಸಿದರು. ಆಯುಶ್‌ ಬದೋನಿ 30, ಡೇವಿಡ್‌ ಮಿಲ್ಲರ್‌ 27 ರನ್‌ ಕೊಡುಗೆ ನೀಡಿದರು. ರಿಷಭ್‌ ಪಂತ್‌(2) ಮತ್ತೆ ವೈಫಲ್ಯ ಅನುಭವಿಸಿದರು.

ಸ್ಕೋರ್‌: ಲಖನೌ 8 ವಿಕೆಟ್‌ಗೆ 203 (ಮಾರ್ಷ್‌ 60, ಮಾರ್ಕ್‌ರಮ್‌ 53, ಹಾರ್ದಿಕ್‌ 5-36), ಮುಂಬೈ 5 ವಿಕೆಟ್‌ಗೆ 191 (ಸೂರ್ಯಕುಮಾರ್‌ 67, ನಮನ್‌ ಧೀರ್ 46, ದಿಗ್ವೇಶ್‌ 1-21)

01 ನಾಯಕ

ಐಪಿಎಲ್‌ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ ಗೊಂಚಲು ಪಡೆದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಹಾರ್ದಿಕ್ ಪಾಂಡ್ಯ ಪಾತ್ರರಾಗಿದ್ದಾರೆ.

01ನೇ ಬಾರಿ

ಹಾರ್ದಿಕ್‌ ಮೊದಲ ಬಾರಿ ಟಿ20 ಕ್ರಿಕೆಟ್‌ನಲ್ಲಿ 5 ವಿಕೆಟ್‌ ಗೊಂಚಲು ಪಡೆದರು. 2023ರಲ್ಲಿ ನ್ಯೂಜಿಲೆಂಡ್‌ ವಿರುದ್ಧ 16 ರನ್‌ಗೆ 4 ವಿಕೆಟ್‌ ಪಡೆದಿದ್ದು ಈ ವರೆಗಿನ ಸಾಧನೆ.

-ದಂಡ ಬಿದ್ದರೂ

ಸೆಲೆಬ್ರೇಷನ್‌

ಬಿಡದ ದಿಗ್ವೇಶ್‌!

ಪಂಜಾಬ್‌ ವಿರುದ್ಧ ಪಂದ್ಯದಲ್ಲಿ ಪ್ರಿಯಾನ್ಶ್‌ ಆರ್ಯರನ್ನು ಔಟ್‌ ಮಾಡಿದ್ದ ಲಖನೌ ಸ್ಪಿನ್ನರ್‌ ದಿಗ್ವೇಶ್‌, ನೋಟ್‌ಬುಕ್‌ ಸಂಭ್ರಮಾಚರಣೆ ಮಾಡಿ ಭಾರೀ ದಂಡಕ್ಕೆ ಗುರಿಯಾಗಿದ್ದರು. ಪಂದ್ಯದ ಸಂಭಾವನೆಯ ಶೇ.25ರಷ್ಟು ದಂಡ ವಿಧಿಸಲಾಗಿತ್ತು. ಆದರೆ ಮುಂಬೈ ವಿರುದ್ಧ ಪಂದ್ಯದಲ್ಲೂ ದಿಗ್ವೇಶ್‌ ನೋಟ್‌ಬುಕ್‌ ಸೆಲೆಬ್ರೇಷನ್‌ ಮಾಡಿದ್ದಾರೆ.