ಸಾರಾಂಶ
ಆಸ್ಟ್ರೇಲಿಯಾ ಸದ್ಯ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮತ್ತೊಂದು ಟೆಸ್ಟ್ ಪಂದ್ಯವನ್ನೂ ಗೆಲ್ಲುವ ಮೂಲಕ ನ್ಯೂಜಿಲೆಂಡ್ ನೆಲದಲ್ಲಿ ಸರಣಿ ಗೆಲ್ಲುವ ತವಕ ಕಾಂಗರೂ ಪಡೆಯದ್ದು.
ವೆಲ್ಲಿಂಗ್ಟನ್: ನೇಥನ್ ಲಯನ್ ಪಡೆದ 10 ವಿಕೆಟ್‌ಗಳ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 172 ರನ್ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ಗೆಲುವಿಗೆ 369 ರನ್ ಗುರಿ ಪಡೆದಿದ್ದ ಕಿವೀಸ್ 196 ರನ್‌ಗೆ ಸರ್ವಪತನ ಕಂಡಿತು. 3ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 111 ರನ್ ಗಳಿಸಿದ್ದ ಕಿವೀಸ್‌ಗೆ ಭಾನುವಾರ ನೇಥನ್ ದುಸ್ವಪ್ನವಾಗಿ ಕಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದಿದ್ದ ಅವರು 2ನೇ ಇನ್ನಿಂಗ್ಸ್‌ನಲ್ಲಿ 64 ರನ್ ನೀಡಿ 6 ವಿಕೆಟ್ ಕಿತ್ತು ಆಸೀಸ್ ಗೆಲುವಿನ ರೂವಾರಿ ಎನಿಸಿಕೊಂಡರು. ರಚಿನ್ ರವೀಂದ್ರ(59) ಏಕಾಂಗಿ ಹೋರಾಟ ವ್ಯರ್ಥವಾಯಿತು.ನಿವೃತ್ತಿ ಹೇಳಿದ್ದ ವ್ಯಾಗ್ನರ್ ಮತ್ತೆ ಕಿವೀಸ್ ತಂಡಕ್ಕೆ
ಕ್ರೈಸ್ಟ್‌ಚರ್ಚ್: ಕೆಲ ದಿನಗಳ ಹಿಂದಷ್ಟೇ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ನ್ಯೂಜಿಲೆಂಡ್‌ನ ವೇಗಿ ನೀಲ್ ವ್ಯಾಗ್ನರ್ ಅವರಿಗೆ ಮತ್ತೆ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಮೊದಲ ಟೆಸ್ಟ್‌ನಲ್ಲಿ ವೇಗಿ ವಿಲ್ ಒರೌರ್ಕೆ ಗಾಯಗೊಂಡಿದ್ದು, 2ನೇ ಟೆಸ್ಟ್‌ನಿಂದ ಹೊರಗುಳಿಯುವ ಸಾಧ್ಯತೆಯಿದೆ. ಹೀಗಾಗಿ ಅವರ ಬದಲು ವ್ಯಾಗ್ನರ್‌ಗೆ ಕರೆ ನೀಡುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.