ಮಹಾರಾಜ ಸೆಮೀಸ್‌ಗೆ ಅಖಾಡ ಸಿದ್ಧ: ಇಂದು ಬೆಂಗಳೂರು-ಗುಲ್ಬರ್ಗಾ, ನಾಳೆ ಮೈಸೂರು-ಹುಬ್ಬಳ್ಳಿ ಫೈಟ್‌

| Published : Aug 30 2024, 01:06 AM IST / Updated: Aug 30 2024, 04:00 AM IST

ಸಾರಾಂಶ

ಶುಕ್ರವಾರ ಮೊದಲ ಸೆಮಿಫೈನಲ್‌, ಶನಿವಾರ 2ನೇ ಸೆಮಿಫೈನಲ್‌ ಪಂದ್ಯಗಳು ನಡೆಯಲಿವೆ. ಗೆಲ್ಲುವ ತಂಡಗಳು ಭಾನುವಾರ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

 ಬೆಂಗಳೂರು :  3 ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಸೆಮಿಫೈನಲ್‌ ವೇಳಾಪಟ್ಟಿ ಅಂತಿಮಗೊಂಡಿದೆ. ಶುಕ್ರವಾರ ಮೊದಲ ಸೆಮಿಫೈನಲ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್‌ ಸೆಣಸಾಡಲಿವೆ. 

ಶನಿವಾರ ನಡೆಯಲಿರುವ 2ನೇ ಸೆಮಿಫೈನಲ್‌ನಲ್ಲಿ ಮೈಸೂರು ವಾರಿಯರ್ಸ್‌ ಹಾಗೂ ಹಾಲಿ ಚಾಂಪಿಯನ್‌ ಹುಬ್ಬಳ್ಳಿ ಟೈಗರ್ಸ್‌ ಮುಖಾಮುಖಿಯಾಗಲಿವೆ.ಗುರುವಾರ ನಡೆಯಬೇಕಿದ್ದ ಮಂಗಳೂರು ಹಾಗೂ ಬೆಂಗಳೂರು ನಡುವಿನ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತು. ಇತ್ತಂಡಗಳು ತಲಾ 1 ಅಂಕ ಹಂಚಿಕೊಂಡವು.

 ಇದರೊಂದಿಗೆ ಗುಂಪು ಹಂತದ 10 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 15 ಅಂಕ ಸಂಪಾದಿಸಿದ ಬೆಂಗಳೂರು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಖಚಿತಪಡಿಸಿಕೊಂಡಿತು. ಗುಲ್ಬರ್ಗಾ 4ನೇ ಸ್ಥಾನ ಪಡೆದುಕೊಂಡಿತು.ಅತ್ತ, ಮೈಸೂರು ವಾರಿಯರ್ಸ್‌ ತಂಡ 10 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ 3ನೇ ಸ್ಥಾನಿಯಾಯಿತು. ಗುರುವಾರದ ಕೊನೆ ಪಂದ್ಯದಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್‌ ವಿರುದ್ಧ ಸೋಲನುಭವಿಸಿದ ಹುಬ್ಬಳ್ಳಿ 12 ಅಂಕಗಳೊಂದಿಗೆ 3ನೇ ಸ್ಥಾನ ಪಡೆದುಕೊಂಡಿತು. 

ಮೈಸೂರು ವಾರಿಯರ್ಸ್‌ ತಂಡ 14 ಅಂಕಗಳೊಂದಿಗೆ 2ನೇ ಸ್ಥಾನ ಪಡೆದು ಅಭಿಯಾನ ಕೊನೆಗೊಳಿಸಿತು.ಶಿವಮೊಗ್ಗ ಹಾಗೂ ಮಂಗಳೂರು ಈಗಾಗಲೇ ಸೆಮಿಫೈನಲ್‌ ರೇಸ್‌ನಿಂದ ಹೊರಬಿದ್ದಿದ್ದವು. ಶಿವಮೊಗ್ಗ 10 ಪಂದ್ಯಗಳಲ್ಲಿ 3 ಗೆಲುವಿನೊಂದಿಗೆ 6 ಅಂಕ ಗಳಿಸಿದ್ದರೆ, ಮಂಗಳೂರು ಕೇವಲ 1 ಜಯದೊಂದಿಗೆ 4 ಅಂಕ ಗಳಿಸಿತು.