ಡಬ್ಲ್ಯುಪಿಎಲ್‌: ಸತತ 2 ಸೋಲಿನ ಬಳಿಕ ಮತ್ತೆ ಜಯದ ಹಳಿಗೆ ಮರಳಿದ ಆರ್‌ಸಿಬಿ

| Published : Mar 05 2024, 01:36 AM IST / Updated: Mar 05 2024, 09:23 AM IST

ಸಾರಾಂಶ

ಯುಪಿ ವಾರಿಯರ್ಸ್‌ ವಿರುದ್ಧ 23 ರನ್ ಗೆಲುವು ಸಾಧಿಸಿದ ಆರ್‌ಸಿಬಿ ತವರಿನಲ್ಲಿ ಗೆಲುವಿನೊಂದಿಗೆ ಅಭಿಯಾನ ಕೊನೆಗೊಳಿಸಿತು. ಇದು ಟೂರ್ನಿಯಲ್ಲಿ ಯುಪಿ ವಿರುದ್ಧ 2ನೇ ಹಾಗೂ ಒಟ್ಟಾರೆ 3ನೇ ಜಯ.

ಬೆಂಗಳೂರು: ನಾಯಕಿ ಸ್ಮೃತಿ ಮಂಧನಾ ಹಾಗೂ ಎಲೈಸಿ ಪೆರ್ರಿ ಸ್ಫೋಟಕ ಆಟ, ಬೌಲರ್‌ಗಳ ಶಿಸ್ತುಬದ್ಧ ದಾಳಿ ನೆರವಿನಿಂದ 2ನೇ ಆವೃತ್ತಿ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಗೆಲುವಿನ ಹಳಿಗೆ ಮರಳಿದೆ.

ಆರಂಭಿಕ 2 ಜಯದ ಬಳಿಕ ಸತತ 2 ಪಂದ್ಯಗಳಲ್ಲಿ ಸೋಲನುಭವಿಸಿದ್ದ ಆರ್‌ಸಿಬಿಗೆ ಸೋಮವಾರ ಯುಪಿ ವಾರಿಯರ್ಸ್‌ ವಿರುದ್ಧ 23 ರನ್‌ಗಳಿಂದ ಗೆಲುವು ಲಭಿಸಿತು.

ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ 3 ವಿಕೆಟ್‌ ಕಳೆದುಕೊಂಡು 198 ರನ್‌ ಕಲೆಹಾಕಿತು. ಮೇಘನಾ 28 ರನ್‌ಗೆ ವಿಕೆಟ್‌ ಒಪ್ಪಿಸಿದ ಬಳಿಕ 2ನೇ ವಿಕೆಟ್‌ಗೆ ಜೊತೆಯಾದ ಮಂಧನಾ ಹಾಗೂ ಪೆರ್ರಿ ಯುಪಿ ಬೌಲರ್‌ಗಳನ್ನು ಚೆಂಡಾಡಿದರು. 

ಈ ಜೋಡಿ 64 ಎಸೆತಗಳಲ್ಲಿ 95 ರನ್‌ ಸೇರಿಸಿತು. ಮಂಧನಾ 50 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್‌ನೊಂದಿಗೆ 80 ರನ್‌ ಸಿಡಿಸಿದರೆ, ಪೆರ್ರಿ 37 ಎಸೆತಗಳಲ್ಲಿ 58 ರನ್‌ ಚಚ್ಚಿದರು. 

ರಿಚಾ ಘೋಷ್ ಕೂಡಾ ಕೊನೆಯಲ್ಲಿ ಅಬ್ಬರಿಸಿ 10 ಎಸೆತಗಳಲ್ಲಿ 21 ರನ್‌ ಬಾರಿಸಿದರು.ದೊಡ್ಡ ಗುರಿ ಬೆನ್ನತ್ತಿದ ಯುಪಿ ಸುಲಭದಲ್ಲಿ ಸೋಲೊಪ್ಪಿಕೊಳ್ಳಲಿಲ್ಲ. 

ಸತತ ವಿಕೆಟ್ ಕಳೆದುಕೊಂಡ ಹೊರತಾಗಿಯೂ ಆರಂಭಿಕ ಆಟಗಾರ್ತಿ ನಾಯಕಿ ಅಲೀಸಾ ಹೀಲಿ(38 ಎಸೆತಗಳಲ್ಲಿ 55) 13ನೇ ಓವರ್‌ವರೆಗೂ ಕ್ರೀಸ್‌ನಲ್ಲಿ ನೆಲೆಯೂರಿ ಆರ್‌ಸಿಬಿ ಪಾಲಿಗೆ ದುಸ್ವಪ್ನವಾಗಿ ಕಾಡಿದರು. 

ಆದರೆ ಅವರ ನಿರ್ಗಮನದ ಬಳಿಕ ಇತರ ಬ್ಯಾಟರ್‌ಗಳಿಂದ ಹೆಚ್ಚೇನೂ ಜಾದೂ ಮಾಡಲು ಸಾಧ್ಯವಾಗಲಿಲ್ಲ. ದೀಪ್ತಿ ಶರ್ಮಾ(22 ಎಸೆತದಲ್ಲಿ 33), ಪೂನಂ ಕೆಮ್ನರ್‌(24 ಎಸೆತದಲ್ಲಿ 31) ಹೋರಾಟ ತಂಡಕ್ಕೆ ಗೆಲುವು ತಂದುಕೊಡಲಿಲ್ಲ.

ಸ್ಕೋರ್‌: ಬೆಂಗಳೂರು 20 ಓವರಲ್ಲಿ 198/3 (ಮಂಧನಾ 80, ಪೆರ್ರಿ 58, ಎಕ್ಲೆಸ್ಟೋನ್‌ 1-22), ಯುಪಿ 20 ಓವರಲ್ಲಿ 175/8(ಹೀಲಿ 55, ದೀಪ್ತಿ ಶರ್ಮಾ 33, ಡಿವೈನ್‌ 2-37)

ಇಂದಿನ ಪಂದ್ಯ: ಡೆಲ್ಲಿ-ಮುಂಬೈ । ಸ್ಥಳ: ನವದೆಹಲಿ