ಮಂಡ್ಯ ಓಪನ್‌: ಸೆಮಿ ಫೈನಲ್‌ ತಲುಪಿದ ಸಿದ್ಧಾರ್ಥ್‌, ಕರಣ್‌

| Published : Jan 13 2024, 01:35 AM IST

ಮಂಡ್ಯ ಓಪನ್‌: ಸೆಮಿ ಫೈನಲ್‌ ತಲುಪಿದ ಸಿದ್ಧಾರ್ಥ್‌, ಕರಣ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಓಪನ್‌ ಅಂತಾರಾಷ್ಟ್ರೀಯ ಟೆನಿಸ್‌ ಪಂದ್ಯಾವಳಿಯಲ್ಲಿ ಸಿದ್ಧಾರ್ಥ್‌ ವಿಶ್ವಕರ್ಮ ಮತ್ತು ಕರಣ್‌ ಸಿಂಗ್‌ ಸೆಮಿ ಫೈನಲ್‌ ತಲುಪಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲಿ ಮಧ್ವಿನ್‌ ಕಾಮತ್‌ ಸೋಲು ಅನುಭವಿಸುವ ಮೂಲಕ ನಿರಾಸೆ ಉಂಟುಮಾಡಿದರು.

ಮಂಡ್ಯ: ಮಂಡ್ಯ ಓಪನ್‌ ಅಂತಾರಾಷ್ಟ್ರೀಯ ಟೆನಿಸ್‌ ಪಂದ್ಯಾವಳಿಯಲ್ಲಿ ಭಾರತದ ಇಬ್ಬರು ತಾರೆಗಳು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಎದುರಾಳಿಗಳನ್ನು ಮಣಿಸಿದ ಸಿದ್ಧಾರ್ಥ್‌ ವಿಶ್ವಕರ್ಮ ಮತ್ತು ಕರಣ್‌ ಸಿಂಗ್‌ ಜಯದ ಓಟ ಮುಂದುವರಿಸಿದ್ದಾರೆ. ಆದರೆ ಮಧ್ವಿನ್‌ ಕಾಮತ್‌ ಸೋತು ನಿರಾಸೆ ಅನುಭವಿಸಿದರು.ಹರ್ಯಾಣದ ಕರಣ್‌ ಅವರು ದಕ್ಷಿಣ ಆಫ್ರಿಕಾ ಕ್ರಿಸ್‌ ವ್ಯಾನ್‌ ವಿಕ್‌ ವಿರುದ್ಧ 6-3, 6-3 ನೇರ ಸೆಟ್‌ಗಳಲ್ಲಿ ಜಯ ಸಾಧಿಸಿದರು. ಮತ್ತೊಂದು ಪಂದ್ಯದಲ್ಲಿ ವಿಯೆಟ್ನಾಂನ ನಾಮ್‌ ಹೊಂಗ್‌ ಲಿ ವಿರುದ್ಧ ಸಿದ್ಧಾರ್ಥ್‌ ವಿಶ್ವಕರ್ಮ 6-1, 6-4 ನೇರ ಸೆಟ್‌ಗಳಿಂದ ಗೆದ್ದರು. ಮದ್ವಿನ್‌ ಕಾಮತ್‌ ಅವರು ಇಸ್ರೇಲ್‌ ಒರೆಲ್‌ ಕೇಮ್ಹಿ ಅವರಿಗೆ ಶರಣಾದರು.ಸೆಮಿಫೈನಲ್‌ನಲ್ಲಿ ಸಿದ್ಧಾರ್ಥ್‌ಗೆ ಓರೆಲ್‌ ಕಿಮ್ಹಿ ಸವಾಲು ಎದುರಾಗಲಿದ್ದು, ಕರಣ್‌ ಸಿಂಗ್ ಅವರು ನೆದರ್‌ಲೆಂಡ್ಸ್‌ನ ಜೆಲ್ಲೆ ಸೆಲ್ಸ್‌ ವಿರುದ್ಧ ಸೆಣಸಾಡಲಿದ್ದಾರೆ.

-ಇಂದು ಡಬಲ್ಸ್‌ ಫೈನಲ್‌

ಇದೇ ವೇಳೆ ಡಬಲ್ಸ್‌ನಲ್ಲಿ ಭಾರತದ ಕರಣ್‌ ಸಿಂಗ್‌-ಕೊರಿಯಾದ ವೂಬಿನ್‌ ಶಿನ್‌, ಪರೀಕ್ಷಿತ್‌ ಸೊಮಾನಿ-ಮನೀಶ್‌ ಸುರೇಶ್‌ ಕುಮಾರ್‌ ಜೋಡಿ ಫೈನಲ್‌ ಪ್ರವೇಶಿಸಿದ್ದು, ಶನಿವಾರ ಪ್ರಶಸ್ತಿಗಾಗಿ ಪರಸ್ಪರ ಸೆಣಸಾಡಲಿವೆ.