ಸಾರಾಂಶ
ಬೆಂಗಳೂರು: 3ನೇ ಆವೃತ್ತಿಯ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮಂಗಳೂರು ಡ್ರ್ಯಾಗನ್ಸ್ ಮೊದಲ ಗೆಲುವು ದಾಖಲಿಸಿದೆ. ಶನಿವಾರ ಶಿವಮೊಗ್ಗ ಲಯನ್ಸ್ ವಿರುದ್ಧ ಮಂಗಳೂರು 8 ವಿಕೆಟ್ ಜಯಗಳಿಸಿತು. ಶಿವಮೊಗ್ಗ ಟೂರ್ನಿಯಲ್ಲಿ ಸತತ 2ನೇ ಸೋಲನುಭವಿಸಿತು.ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ ಅಭಿನವ್ ಮನೋಹರ್ ಸ್ಫೋಟಕ ಆಟದ ನೆರವಿನಿಂದ 6 ವಿಕೆಟ್‌ಗೆ 175 ರನ್ ಕಲೆಹಾಕಿತು.
ರೋಹಿತ್ 24, ಧ್ರುವ್ ಪ್ರಭಾಕರ್ 20, ಅವಿನಾಶ್ 22 ರನ್ ಗಳಿಸಿದರೆ, ಮಂಗಳೂರು ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅಭಿನವ್ 34 ಎಸೆತಗಳಲ್ಲಿ 3 ಬೌಂಡರಿ, 9 ಸಿಕ್ಸರ್‌ನೊಂದಿಗೆ 84 ರನ್ ಸಿಡಿಸಿದರು.
ಆರಂಭಿಕ 12 ಓವರ್‌ಗಳಲ್ಲಿ 4 ವಿಕೆಟ್‌ಗೆ ಕೇವಲ 69 ರನ್ ಗಳಿಸಿದ್ದ ತಂಡವನ್ನು ಅಭಿನವ್ ತಮ್ಮ ಅಬ್ಬರದ ಆಟದ ಮೂಲಕ ಮೇಲೆತ್ತಿದರು. ತಂಡ ಕೊನೆ 8 ಓವರಲ್ಲಿ 106 ರನ್ ಸೇರಿಸಿತು.ದೊಡ್ಡ ಗುರಿಯನ್ನು ಲೀಲಾಜಾಲವಾಗಿ ಬೆನ್ನತ್ತಿದ ಮಂಗಳೂರು, 16.2 ಓವರ್‌ಗಳಲ್ಲೇ ಗೆದ್ದು ಸಂಭ್ರಮಿಸಿತು. ಮೊದಲ ವಿಕೆಟ್‌ಗೆ ಮ್ಯಾಕ್‌ನೀಲ್ ನೊರೊನ್ಹಾ ಹಾಗೂ ರೋಹನ್ ಪಾಟೀಲ್ 5.5 ಓವರ್‌ಗಳಲ್ಲಿ 75 ರನ್ ಸೇರಿಸಿದರು.
ನೊರೊನ್ಹಾ 19 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ನೊಂದಿಗೆ 43 ರನ್ ಚಚ್ಚಿದರು. ರೋಹನ್ 40 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್‌ನೊಂದಿಗೆ 72 ರನ್ ಬಾರಿಸಿ ಔಟಾದರು. ಸಿದ್ಧಾರ್ಥ್ 19 ಎಸೆತಗಳಲ್ಲಿ ಔಟಾಗದೆ 38 ರನ್ ಸಿಡಿಸಿ ತಂಡವನ್ನು ಗೆಲ್ಲಿಸಿದರು.ಸ್ಕೋರ್: ಶಿವಮೊಗ್ಗ 20 ಓವರಲ್ಲಿ 175/6 (ಅಭಿನವ್ 84*, ನಿಶ್ಚಿತ್ 2-31), ಮಂಗಳೂರು 16.2 ಓವರ್‌ಗಳಲ್ಲಿ 178/2 (ರೋಹನ್ 72, ನೊರೊನ್ಹಾ 43, ರಾಜ್‌ವೀರ್ 1-23)
ಪಂದ್ಯಶ್ರೇಷ್ಠ: ರೋಹನ್ ಪಾಟೀಲ್