ಕೆಲ ಆಟಗಾರರು ಸಂಪೂರ್ಣ ಟೂರ್ನಿಗೆ ಅಲಭ್ಯರಾದರೆ, ಇನ್ನೂ ಕೆಲವರು ಆರಂಭಿಕ ಕೆಲ ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಗೈರಾಗುವವರಲ್ಲಿ ಶಮಿ, ಪ್ರಸಿದ್ಧ್‌ ಕೃಷ್ಣ, ಬ್ರೂಕ್‌, ಜೇಸನ್‌ ರಾಯ್‌ ಪ್ರಮುಖರು.

ನವದೆಹಲಿ: ಬಹುನಿರೀಕ್ಷಿತ 17ನೇ ಆವೃತ್ತಿ ಐಪಿಎಲ್‌ಗೆ ಕ್ಷಣಗಣನೆ ಆರಂಭಗೊಂಡಿದ್ದು, ಮಾ.22ರಂದು ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಈ ನಡುವೆ ಹಲವು ಪ್ರಮುಖ ಆಟಗಾರರು ಗಾಯದ ಸಮಸ್ಯೆ, ವೈಯಕ್ತಿಕ ಕಾರಣಗಳಿಂದಾಗಿ ಐಪಿಎಲ್‌ನಿಂದ ಹೊರಬಿದ್ದಿದ್ದು ಫ್ರಾಂಚೈಸಿಗಳ ತಲೆನೋವಿಗೆ ಕಾರಣವಾಗಿದೆ. 

ಕೆಲ ಆಟಗಾರರು ಸಂಪೂರ್ಣ ಟೂರ್ನಿಗೆ ಅಲಭ್ಯರಾದರೆ, ಇನ್ನೂ ಕೆಲವರು ಆರಂಭಿಕ ಕೆಲ ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚು.ಹಾಲಿ ಚಾಂಪಿಯನ್‌ ಚೆನ್ನೈ ತಂಡ ಕೆಲ ಪಂದ್ಯಗಳಿಂದ ಸ್ಫೋಟಕ ಬ್ಯಾಟರ್‌ ಡೆವೋನ್‌ ಕಾನ್ವೇ ಸೇವೆಯಿಂದ ವಂಚಿತವಾಗಲಿದೆ. 

ಕಳೆದ ಬಾರಿ ತಂಡ ಚಾಂಪಿಯನ್‌ ಆಗಲು ಕಾನ್ವೇ ಪ್ರಮುಖ ಪಾತ್ರ ವಹಿಸಿದ್ದು, ಅವರ ಗೈರು ತಂಡದ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ. 

ವೇಗಿ ಮಥೀಶ ಪತಿರಣ ಕೂಡಾ ಕೆಲ ಪಂದ್ಯಗಳಿಗೆ ಗೈರಾಗಲಿದ್ದಾರೆ. ಗುಜರಾತ್‌ ಟೈಟಾನ್ಸ್‌ನ ಮೊಹಮದ್‌ ಶಮಿ, ರಾಜಸ್ಥಾನದ ಪ್ರಸಿದ್ಧ್‌ ಕೃಷ್ಣ ಟೂರ್ನಿಯಿಂದಲೇ ಹೊರಬಿದ್ದಿದ್ದು, ಡೆಲ್ಲಿಯ ಹ್ಯಾರಿ ಬ್ರೂಕ್‌ ಹಾಗೂ ಲುಂಗ್ ಎನ್‌ಗಿಡಿ, ಕೋಲ್ಕತಾದ ಜೇಸನ್‌ ರಾಯ್‌ ವೈಯಕ್ತಿಕ ಕಾರಣ ನೀಡಿ ಟೂರ್ನಿಗೆ ಗೈರಾಗಲಿದ್ದಾರೆ.

ಮುಂಬೈ ಇಂಡಿಯನ್ಸ್‌ನ ಪ್ರಮುಖ ಆಟಗಾರ ಸೂರ್ಯಕುಮಾರ್‌ ಕೂಡಾ ಕೆಲ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ವೇಗಿ ದಿಲ್ಶಾನ್‌ ಮಧುಶಂಕ ಕೂಡಾ ಕೆಲವು ಪಂದ್ಯಗಳನ್ನಾಡುವುದಿಲ್ಲ ಎಂದು ವರದಿಯಾಗಿದೆ.