ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ 20 ಮಯಾಂಕ್‌, ಮನೀಶ್‌ ಸೇರಿ ತಾರಾ ಆಟಗಾರರು ರೀಟೈನ್‌

| Published : Jul 21 2024, 01:21 AM IST / Updated: Jul 21 2024, 04:04 AM IST

ಸಾರಾಂಶ

ಶನಿವಾರ ತಂಡಗಳು ತಮ್ಮಲ್ಲೇ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಪ್ರಕಟಿಸಿವೆ. ಎಲ್ಲಾ ತಂಡಗಳು ತಲಾ 4 ಆಟಗಾರರನ್ನು ರೀಟೈನ್‌ ಮಾಡಿಕೊಂಡಿದ್ದು, ಉಳಿದ ಆಟಗಾರರನ್ನು ಹರಾಜಿನಲ್ಲಿ ಖರೀದಿಸಬೇಕಿದೆ.

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುವ 3ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಗೂ ಮುನ್ನ ತಾರಾ ಆಟಗಾರರಾದ ಮಯಾಂಕ್‌ ಅಗರ್‌ವಾಲ್‌, ದೇವದತ್‌ ಪಡಿಕ್ಕಲ್‌, ಮನೀಶ್‌ ಪಾಂಡೆ ಸೇರಿ ಪ್ರಮುಖರನ್ನು ತಂಡಗಳು ರೀಟೈನ್‌ ಮಾಡಿಕೊಂಡಿವೆ. 

ಶನಿವಾರ ತಂಡಗಳು ತಮ್ಮಲ್ಲೇ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಪ್ರಕಟಿಸಿವೆ. ಎಲ್ಲಾ ತಂಡಗಳು ತಲಾ 4 ಆಟಗಾರರನ್ನು ರೀಟೈನ್‌ ಮಾಡಿಕೊಂಡಿದ್ದು, ಉಳಿದ ಆಟಗಾರರನ್ನು ಹರಾಜಿನಲ್ಲಿ ಖರೀದಿಸಬೇಕಿದೆ. ಹಾಲಿ ಚಾಂಪಿಯನ್‌ ಹುಬ್ಬಳ್ಳಿ ಟೈಗರ್ಸ್‌ ಮನೀಶ್‌ ಪಾಂಡೆ, ಶ್ರೀಜಿತ್‌, ಮನ್ವಂತ್‌ ಕುಮಾರ್‌ ಹಾಗೂ ವಿದ್ವತ್‌ ಕಾವೇರಪ್ಪ ಅವರನ್ನು ಉಳಿಸಿಕೊಂಡಿವೆ. 

ಕಳೆದ ಬಾರಿ ರನ್ನರ್‌-ಅಪ್‌ ಮೈಸೂರು ವಾರಿಯರ್ಸ್‌ ತಂಡ ಕರುಣ್‌ ನಾಯರ್‌, ಸಿಎ ಕಾರ್ತಿಕ್‌, ಎಸ್‌ಯು ಕಾರ್ತಿಕ್‌ ಹಾಗೂ ಮನೋಜ್‌ ಭಾಂಡಗೆ ಅವರನ್ನು ರೀಟೈನ್‌ ಮಾಡಿಕೊಂಡಿದ್ದರೆ, ಗುಲ್ಬರ್ಗಾ ಮಿಸ್ಟಿಕ್ಸ್‌ ದೇವದತ್‌ ಪಡಿಕ್ಕಲ್‌, ವಿಜಯ್‌ಕುಮಾರ್ ವೈಶಾಕ್‌, ಸ್ಮರಣ್‌ ರವಿ ಹಾಗೂ ಅನೀಶ್‌ ಕೆ.ವಿ.ಯನ್ನು ಉಳಿಸಿಕೊಂಡಿದೆ. 

ಅಭಿನವ್‌ ಮನೋಹರ್‌, ನಿಹಾಲ್‌ ಉಳ್ಳಾಲ, ಶಿವರಾಜ್‌ ಹಾಗೂ ವಾಸುಕಿ ಕೌಶಿಕ್‌ರನ್ನು ಶಿವಮೊಗ್ಗ ಲಯನ್ಸ್‌ ರೀಟೈನ್‌ ಮಾಡಿಕೊಂಡಿದ್ದರು, ಮಂಗಳೂರು ತಂಡ ನಿಕಿನ್‌ ಜೋಸ್‌, ರೋಹನ್‌ ಪಾಟೀಲ್, ಸಿದ್ಧಾರ್ಥ್‌ ಕೆ.ವಿ. ಹಾಗೂ ಗುರ್ಬಾಕ್ಸ್‌ ಆರ್ಯ, ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಮಯಾಂಕ್‌, ಸೂರಜ್‌ ಅಹುಜಾ, ಶುಭಾಂಗ್‌ ಹೆಗ್ಡೆ ಹಾಗೂ ಮೊಹ್ಸಿನ್‌ ಖಾನ್‌ರನ್ನು ಉಳಿಸಿಕೊಂಡಿದೆ. ಈ ಬಾರಿ ಟೂರ್ನಿ ಆ.15ರಿಂದ ಸೆ.1ರ ವರೆಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಜು.25ರಂದು ಹರಾಜು

ಟೂರ್ನಿಯ ಹರಾಜು ಪ್ರಕ್ರಿಯೆ ಜು.25ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. 300ಕ್ಕೂ ಹೆಚ್ಚು ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.