ಇವರೇ ನೋಡಿ ಐಪಿಎಲ್‌ನ ಹೊಸ ಸ್ಟಾರ್ಸ್‌!

| Published : May 29 2024, 12:45 AM IST

ಸಾರಾಂಶ

ಐಪಿಎಲ್‌ ಟ್ರೋಫಿ ಮೇಲೆ ‘ಪ್ರತಿಭೆಯು ಅವಕಾಶವನ್ನು ಭೇಟಿಯಾದಾಗ’ ಎಂದು ಬರೆದಿದೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಪ್ರತಿ ಬಾರಿಯಂತೆ ಈ ವರ್ಷದ ಐಪಿಎಲ್‌ ಕೂಡ ಹಲವು ಹೊಸ ಪ್ರತಿಭೆಗಳನ್ನು ಕ್ರಿಕೆಟ್‌ ಲೋಕಕ್ಕೆ ಪರಿಚಯಿಸಿತು. ಸಿಕ್ಕ ಅವಕಾಶಗಳನ್ನು ಎರಡೂ ಕೈಗಳಿಂದ ಬಾಚಿಕೊಂಡ ಆಟಗಾರರು ಅಭಿಮಾನಿಗಳಿಗೆ ಮರೆಯಲಾಗದ ಕ್ಷಣಗಳನ್ನು ಕಟ್ಟಿಕೊಟ್ಟರು. ಈ ಐಪಿಎಲ್‌ ಮೂಲಕ ತಮ್ಮ ಕ್ರಿಕೆಟ್‌ ಭವಿಷ್ಯಕ್ಕೆ ಹೊಸ ದಿಕ್ಕು ಕಂಡುಕೊಂಡ ಕೆಲ ಪ್ರಮುಖ ಆಟಗಾರರ ವಿವರ ಇಲ್ಲಿದೆ.

ಫಿಲ್‌ ಸಾಲ್ಟ್‌

ಪಂದ್ಯ: 12 । ರನ್‌: 435 । ಸ್ಟ್ರೈಕ್‌ರೇಟ್‌: 182 । 50: 04

ಫಿಲ್‌ ಸಾಲ್ಟ್‌, ಆಟಗಾರರ ಹರಾಜಿನಲ್ಲಿ ಬಿಕರೆಯಾಗಿರಲಿಲ್ಲ. ಜೇಸನ್‌ ರಾಯ್‌ ಐಪಿಎಲ್‌ನಿಂದ ಹೊರಬೀಳದೆ ಇದ್ದಿದ್ದರೆ ಸಾಲ್ಟ್‌ಗೆ ಬಹುಶಃ ಅವಕಾಶವೇ ಸಿಗುತ್ತಿರಲಿಲ್ಲ. ಸುನಿಲ್‌ ನರೈನ್‌ ಜೊತೆ ಆರಂಭಿಕನಾಗಿ ಕಣಕ್ಕಿಳಿದ ಸಾಲ್ಟ್‌ ಸ್ಫೋಟಕ ಆಟವಾಡಿ ಬಹುತೇಕ ಪಂದ್ಯಗಳಲ್ಲಿ ಕೆಕೆಆರ್‌ಗೆ ಉತ್ತಮ ಆರಂಭ ಒದಗಿಸಿದರು. ಅವರು 435 ರನ್‌ಗಳ ಪೈಕಿ 296 ರನ್‌ಗಳನ್ನು ಪವರ್‌-ಪ್ಲೇನಲ್ಲಿ ಗಳಿಸಿದ್ದು ವಿಶೇಷ. ಮೊದಲ 6 ಓವರಲ್ಲಿ ಅವರ ಸ್ಟ್ರೈಕ್‌ರೇಟ್‌ 185. ಪವರ್‌-ಪ್ಲೇ ಬಳಿಕವೂ ಅಬ್ಬರ ನಿಲ್ಲಿಸದ ಸಾಲ್ಟ್ 175.94ರ ಸ್ಟ್ರೈಕ್‌ರೇಟ್‌ನಲ್ಲಿ ಆಡಿ, ಕೆಕೆಆರ್‌ನ 2ನೇ ಗರಿಷ್ಠ ರನ್‌ ಸರದಾರನಾಗಿ ಹೊರಹೊಮ್ಮಿದರು. ತಂಡ ಪ್ಲೇ-ಆಫ್‌ಗೇರಲು ಸಾಲ್ಟ್‌ ಕೂಡ ಪ್ರಮುಖ ಕಾರಣ.

-----------------------------

ಮಯಾಂಕ್‌ ಯಾದವ್‌

ಪಂದ್ಯ: 04 । ವಿಕೆಟ್‌: 07 । ಪ್ರತಿ ವಿಕೆಟ್‌ಗೆ ತೆಗೆದುಕೊಂಡ ಎಸೆತ: 10.4 । ಎಕಾನಮಿ 6.98

ಮಯಾಂಕ್‌ ಯಾದವ್‌ ಈ ಆವೃತ್ತಿಯಲ್ಲಿ ಆಡಿದ್ದು ಕೇವಲ 4 ಪಂದ್ಯ ಆದರೆ, ಭಾರತೀಯ ಕ್ರಿಕೆಟ್‌ಗೆ ತಾವೆಷ್ಟು ದೊಡ್ಡ ಆಸ್ತಿಯಾಗಬಲ್ಲರು ಎನ್ನುವುದನ್ನು ತೋರಿಸಲು ಅಷ್ಟೇ ಸಾಕಾಯಿತು. ಐಪಿಎಲ್‌ನಲ್ಲಿ ತಮ್ಮ ಪ್ರಯಾಣವನ್ನು ಗಂಟೆಗೆ 147 ಕಿ.ಮೀ. ವೇಗದ ಎಸೆತ (ಪಂಜಾಬ್‌ ವಿರುದ್ಧ)ದೊಂದಿಗೆ ಆರಂಭಿಸಿದ 21ರ ಮಯಾಂಕ್‌, ಟೂರ್ನಿಯಲ್ಲಿ ತಾವೆಸೆದ 3ನೇ ಎಸೆತದಲ್ಲಿ 150 ಕಿ.ಮೀ. ವೇಗವನ್ನು ದಾಟಿದರು. ಅವರ 2ನೇ ಓವರಲ್ಲಿ 155.8 ಕಿ.ಮೀ. ವೇಗದ ಎಸೆತ ದಾಖಲಾಯಿತು. ಮೊದಲ ಪಂದ್ಯದಲ್ಲೇ 21ಕ್ಕೆ 3 ವಿಕೆಟ್‌ ಕಿತ್ತ ಮಯಾಂಕ್‌, ಆರ್‌ಸಿಬಿ ವಿರುದ್ಧ 14ಕ್ಕೆ 3 ವಿಕೆಟ್‌ ಕಬಳಿಸಿ ಪಂದ್ಯಶ್ರೇಷ್ಠರಾದರು. ಗಾಯದ ಕಾರಣ ಮಯಾಂಕ್‌ ಟೂರ್ನಿಯಿಂದ ಹೊರಬೀಳದೆ ಹೋಗಿದ್ದರೆ, ಮತ್ತಷ್ಟು ವೇಗದ ಎಸೆತಗಳನ್ನು ನೋಡಬಹುದಿತ್ತು. ಟೂರ್ನಿಯಲ್ಲಿ ಕೇವಲ 12.1 ಓವರ್‌ ಬೌಲ್‌ ಮಾಡಿದರೂ, ಬಿಸಿಸಿಐನಿಂದ ವೇಗದ ಬೌಲರ್‌ಗಳ ಗುತ್ತಿಗೆ ಪಡೆಯುವಲ್ಲಿ ಯಶಸ್ವಿಯಾದರು.

-----------------------------

ಹರ್ಷಿತ್‌ ರಾಣಾ

ಪಂದ್ಯ: 13 । ವಿಕೆಟ್‌: 19 । ಪ್ರತಿ ವಿಕೆಟ್‌ಗೆ ತೆಗೆದುಕೊಂಡ ಎಸೆತ: 13.3 । ಎಕಾನಮಿ: 9.08

ಹರ್ಷಿತ್‌ ರಾಣಾ 2022ರಲ್ಲಿ ಕೇವಲ 2, 2023ರಲ್ಲಿ ಕೇವಲ 6 ಪಂದ್ಯಗಳನ್ನು ಆಡಿದ್ದರು. ಅವರ ಬಗ್ಗೆ ಯಾರಿಗೂ ಅಷ್ಟಾಗಿ ತಿಳಿದಿರಲಿಲ್ಲ. ಆದರೆ, ಈ ಆವೃತ್ತಿಯಲ್ಲಿ ಕೆಕೆಆರ್‌ ಪರ ಅವರು ಮಿಂಚಿನ ಆಟವಾಡಿದರು. ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಬೌಲ್‌ ಮಾಡಿ, ನಿರ್ಣಾಯಕ ವಿಕೆಟ್‌ಗಳನ್ನು ಉರುಳಿಸಿದ್ದಲ್ಲದೇ, ಉತ್ತಮ ಎಕಾನಮಿ ರೇಟ್‌ ಸಹ ಕಾಯ್ದುಕೊಂಡರು. ಇನ್ನಿಂಗ್ಸ್‌ನ ಕೇವಲ ಒಂದು ಹಂತದಲ್ಲಷ್ಟೇ ಹರ್ಷಿತ್‌ ಪರಿಣಾಮಕಾರಿಯಾಗದೆ, ಎಲ್ಲಾ ಹಂತಗಳಲ್ಲೂ ಪ್ರಭಾವಿ ಪ್ರದರ್ಶನ ನೀಡಿದರು. ಅವರು ಗಳಿಸಿದ ಒಟ್ಟು 19 ವಿಕೆಟ್‌ಗಳ ಪೈಕಿ 4 ವಿಕೆಟ್‌ ಪವರ್‌-ಪ್ಲೇನಲ್ಲಿ ಬಂದರೆ, ಮಧ್ಯ ಓವರ್‌ಗಳಲ್ಲಿ 9, ಡೆತ್‌ ಓವರ್‌ಗಳಲ್ಲಿ 6 ವಿಕಟ್‌ಗಳನ್ನು ಕಿತ್ತರು. ಎಲ್ಲಾ ಹಂತಗಳಲ್ಲೂ 10 ರನ್‌ಗಿಂತ ಕಡಿಮೆ ಎಕಾನಮಿ ರೇಟ್‌ ಕಾಯ್ದುಕೊಂಡಿದ್ದು ವಿಶೇಷ. -

-----------------------------

ಟ್ರಿಸ್ಟನ್‌ ಸ್ಟಬ್ಸ್‌

ಪಂದ್ಯ: 14 । ರನ್‌: 378 । ಸ್ಟ್ರೈಕ್‌ರೇಟ್‌: 190.90 । 50: 03

ಮುಂಬೈ ಪರ 2 ಆವೃತ್ತಿಗಳಲ್ಲಿ ಒಟ್ಟಾರೆ ಕೇವಲ 4 ಪಂದ್ಯಗಳನ್ನಾಡಿದ್ದ ದ.ಆಫ್ರಿಕಾದ ಟ್ರಿಸ್ಟನ್‌ ಸ್ಟಬ್ಸ್‌ರನ್ನು ಹರಾಜಿನಲ್ಲಿ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತನ್ನ ತಂಡದ ಫಿನಿಶರ್‌ ಆಗಿ ಬಳಸಿಕೊಂಡಿತು. ಈ ಐಪಿಎಲ್‌ನಲ್ಲಿ 23ರ ಸ್ಟಬ್ಸ್‌ ಡೆಲ್ಲಿ ಪರ 2ನೇ ಗರಿಷ್ಠ ರನ್‌ ಸರದಾರನಾದರು. 190.90 ಸ್ಟ್ರೈಕ್‌ರೇಟ್‌ನಲ್ಲಿ 54ರ ಸರಾಸರಿಯಲ್ಲಿ ಸ್ಟಬ್ಸ್‌ 378 ರನ್ ಸಿಡಿಸಿದರು. 360 ಡಿಗ್ರಿ ಬ್ಯಾಟರ್‌ ಆಗಿ ಕಾಣಿಸಿಕೊಂಡ ಸ್ಟಬ್ಸ್‌ ಮೈದಾನದ ಎಲ್ಲಾ ಭಾಗಗಳಿಗೂ ಚೆಂಡನ್ನು ಅಟ್ಟಿ ಎದುರಾಳಿಗಳಿಗೆ ಕಂಟಕರಾದರು. ವೇಗಿಗಳ ವಿರುದ್ಧ 198.30 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಸ್ಟಬ್ಸ್‌, ಸ್ಪಿನ್ನರ್‌ಗಳ ವಿರುದ್ಧ 180ರ ಸ್ಟ್ರೈಕ್‌ನಲ್ಲಿ ಆಡಿದರು. ಈ ಆವೃತ್ತಿಯಲ್ಲಿ ಕನಿಷ್ಠ 100 ಎಸೆತ ಎದುರಿಸಿದ ಆಟಗಾರರ ಪೈಕಿ ಡೆತ್‌ ಓವರ್ಸ್‌ನಲ್ಲಿ ಅತಿಹೆಚ್ಚು ಸ್ಟ್ರೈಕ್‌ರೇಟ್‌ (297.33) ಹೊಂದಿದ ಆಟಗಾರ ಸ್ಟಬ್ಸ್‌. 17ರಿಂದ 20 ಓವರ್‌ ನಡುವೆ ಸ್ಟಬ್ಸ್‌ ಎದುರಿಸಿದ ಒಟ್ಟು 75 ಎಸೆತಗಳಲ್ಲಿ ಕೇವಲ 2 ಡಾಟ್‌ ಬಾಲ್‌ಗಳಿದ್ದವು.

-----------------------

ಜೇಕ್‌ ಫ್ರೇಸರ್‌ ಮೆಕ್‌ಗರ್ಕ್‌

ಪಂದ್ಯ: 09 । ರನ್‌: 330 । ಸ್ಟ್ರೈಕ್‌ರೇಟ್‌: 234.04 । 50: 04

ಆಸ್ಟ್ರೇಲಿಯಾದ ಜೇಕ್‌ ಫ್ರೇಸರ್‌ರಷ್ಟು ವೇಗವಾಗಿ ಐಪಿಎಲ್‌ನಲ್ಲಿ ಇಂಪ್ಯಾಕ್ಟ್‌ ಮಾಡಿದ ಆಟಗಾರ ಬಹುಶಃ ಮತ್ತೊಬ್ಬರಿಲ್ಲ. 22 ವರ್ಷದ ಆಟಗಾರರನ್ನು ಟೂರ್ನಿ ಶುರುವಾದ 2 ವಾರಗಳ ಬಳಿಕ ಗಾಯಾಳು ಲುಂಗಿ ಎನ್‌ಗಿಡಿ ಬದಲು ಡೆಲ್ಲಿ ಸೇರ್ಪಡೆ ಮಾಡಿಕೊಂಡಿತು. ಡೇವಿಡ್‌ ವಾರ್ನರ್‌ ಜೊತೆ ಓಡಾಡಿಕೊಂಡು, ಅವರ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದ ಮೆಕ್‌ಗರ್ಕ್‌ ತಂಡಕ್ಕೆ ಕಾಲಿಡುತ್ತಿದ್ದಂತೆ ವಾರ್ನರ್‌ರನ್ನೇ ಆಡುವ ಹನ್ನೊಂದರಿಂದ ಹೊರಕ್ಕೆ ಹಾಕಿದರು. ಈ ಆವೃತ್ತಿಯಲ್ಲಿ ಜೇಕ್‌ ಎದುರಿಸಿದ್ದು ಕೇವಲ 141 ಎಸೆತಗಳಷ್ಟೇ ಆದರೂ ತಂಡದ ಪರ 3ನೇ ಗರಿಷ್ಠ ರನ್‌ ಸರದಾರನಾದರು. 234.04ರ ಸ್ಟ್ರೈಕ್‌ರೇಟ್‌ನಲ್ಲಿ ಮೆರ್ಕ್‌ಗರ್ಕ್‌ 330 ರನ್‌ ಚಚ್ಚಿದರು. ಅವರ 4 ಅರ್ಧಶತಕಗಳ ಪೈಕಿ 2 ಅರ್ಧಶತಕಗಳು 15 ಎಸೆತಗಳಲ್ಲಿ ದಾಖಲಾದರೆ, ಇನ್ನೊಂದಕ್ಕೆ 19 ಎಸೆತ ತೆಗೆದುಕೊಂಡರು. ಮತ್ತೊಂದಕ್ಕೆ 31 ಎಸೆತ ಬೇಕಾಯಿತು. ಅವರು ಗಳಿಸಿದ 330 ರನ್‌ ಪೈಕಿ 296 ರನ್‌ಗಳು ಬೌಂಡರಿ, ಸಿಕ್ಸರ್‌ಗಳಿಂದಲೇ (32 ಬೌಂಡರಿ, 28 ಸಿಕ್ಸರ್‌) ದಾಖಲಾಯಿತು ಎಂದರೆ ನಂಬಲಸಾಧ್ಯ.

---------------------------

ಶಶಾಂಕ್‌ ಸಿಂಗ್‌

ಪಂದ್ಯ: 14 । ರನ್‌: 354 । ಸ್ಟ್ರೈಕ್‌ರೇಟ್‌: 164.65 । 50: 02

ಹರಾಜಿನಲ್ಲಿ ಗೊಂದಲ ಉಂಟಾಗಿ ಪಂಜಾಬ್‌ ಕಿಂಗ್ಸ್‌ ಶಶಾಂಕ್‌ ಸಿಂಗ್‌ರನ್ನು ಖರೀದಿಸಿತ್ತು. ಆದರೆ ಶಶಾಂಕ್‌ರ ಅಬ್ಬರದ ಬ್ಯಾಟಿಂಗ್‌ ಅವರ ಸಾಮರ್ಥ್ಯದ ಬಗ್ಗೆ ಯಾವ ಗೊಂದಲವೂ ಬಾಕಿ ಉಳಿಯದಂತೆ ಮಾಡಿತು. ಪಂಜಾಬ್‌ ಪಾಲಿಗೆ 2024ರ ಐಪಿಎಲ್‌ ಫಲದಾಯಕವಾಗಿರಲಿಲ್ಲ, ಆದರೆ ಮುಂದಿನ ಆವೃತ್ತಿಯ ಮೆಗಾ ಹರಾಜಿನಲ್ಲಿ ಶಶಾಂಕ್‌ ತಮಗೆ ಭಾರಿ ಡಿಮ್ಯಾಂಡ್‌ ಇರುವಂತೆ ಮಾಡಿಕೊಂಡಿದ್ದಾರೆ. 164.65ರ ಸ್ಟ್ರೈಕ್‌ರೇಟ್‌ನಲ್ಲಿ 354 ರನ್‌ ಸಿಡಿಸಿ ಪಂಜಾಬ್‌ ಪರ ಅತಿಹೆಚ್ಚು ರನ್‌ ಕಲೆಹಾಕಿದ ಬ್ಯಾಟರ್‌ ಎನಿಸಿದ ಶಶಾಂಕ್‌, ತಾವೊಬ್ಬ ಅಪ್ಪಟ ಟಿ20 ಫಿನಿಶರ್‌ ಎನ್ನುವುದನ್ನು ಕ್ರಿಕೆಟ್‌ ಜಗತ್ತಿಗೆ ತೋರಿಸಿಕೊಟ್ಟರು. ಕೆಕೆಆರ್‌ ವಿರುದ್ಧ ಪಂಜಾಬ್‌ 262 ರನ್‌ ಬೆನ್ನತ್ತಿ ಟಿ20 ವಿಶ್ವ ದಾಖಲೆ ಬರೆಯುವಲ್ಲಿ ಶಶಾಂಕ್‌ರ ಪಾತ್ರವೂ ಇತ್ತು. ಆ ಇನ್ನಿಂಗ್ಸಲ್ಲಿ ಅವರು ಕೇವಲ 28 ಎಸೆತದಲ್ಲಿ ಔಟಾಗದೆ 68 ರನ್‌ ಸಿಡಿಸಿದ್ದರು.

----------

ಅಭಿಷೇಕ್‌ ಪೊರೆಲ್‌

ಪಂದ್ಯ: 14 । ರನ್‌: 327 । ಸ್ಟ್ರೈಕ್‌ರೇಟ್‌: 159.51 । 50: 02

ಆವೃತ್ತಿಯ ಮೊದಲ ಪಂದ್ಯದಲ್ಲಿ ಇಂಪ್ಯಾಕ್ಟ್‌ ಆಟಗಾರನಾಗಿ 9ನೇ ಕ್ರಮಾಂಕದಲ್ಲಿ ಆಡಿದ ಅಭಿಷೇಕ್‌ ಪೊರೆಲ್‌, 10 ಎಸೆತದಲ್ಲಿ 32 ರನ್‌ ಸ್ಫೋಟಿಸಿ ಗಮನ ಸೆಳೆದರು. ಆ ಬಳಿಕ ಬಂಗಾಳದ 21ರ ಕೀಪರ್‌-ಬ್ಯಾಟರ್‌ ತಂಡದ ಕಾಯಂ ಸದಸ್ಯರಾದರು. ಎಷ್ಟರ ಮಟ್ಟಿಗೆ ಎಂದರೆ ಪೃಥ್ವಿ ಶಾರನ್ನೇ ಡೆಲ್ಲಿ ಹೊರಗೆ ಕೂರಿಸಬೇಕಾಯಿತು. ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡ ಪೊರೆಲ್‌, ತಂಡದ 4ನೇ ಗರಿಷ್ಠ ರನ್‌ ಸರದಾರನಾದರು. ಕೊನೆಯ 3 ಇನ್ನಿಂಗ್ಸಲ್ಲಿ 2 ಅರ್ಧಶತಕ ಸಿಡಿಸಿದ ಅಭಿಷೇಕ್‌ ತಂಡದ ಗೆಲುವಿಗೆ ಕಾರಣರಾದರು. 2025ರ ಐಪಿಎಲ್‌ ಹರಾಜಿನಲ್ಲಿ ಪೊರೆಲ್‌ಗೆ ಉತ್ತಮ ಬೇಡಿಕೆ ಏರ್ಪಡುವುದರಲ್ಲಿ ಅನುಮಾನವಿಲ್ಲ.

-----------------------

ನಿತೀಶ್‌ ಕುಮಾರ್‌ ರೆಡ್ಡಿ

ಪಂದ್ಯ: 13 । ರನ್‌: 303 । ಸ್ಟ್ರೈಕ್‌ರೇಟ್‌: 142.92 । 50: 02 । ವಿಕೆಟ್‌: 03

21ರ ನಿತೀಶ್‌ ರೆಡ್ಡಿ ತಾವೊಬ್ಬ ಪ್ರತಿಭಾನ್ವಿತ ಆಲ್ರೌಂಡರ್‌ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. 11 ಇನ್ನಿಂಗ್ಸಲ್ಲಿ 142.92ರ ಸ್ಟ್ರೈಕ್‌ರೇಟ್‌ನಲ್ಲಿ 303 ರನ್‌ ಗಳಿಸಿದ ನಿತೀಶ್‌, ಕೆಲ ಪ್ರಮುಖ ಘಟ್ಟದಲ್ಲಿ ತಂಡಕ್ಕೆ ಆಸರೆಯಾದರು. ಪಂಜಾಬ್‌ ವಿರುದ್ಧ 37 ಎಸೆತದಲ್ಲಿ 64 ರನ್‌ ಗಳಿಸಿದ ನಿತೀಶ್‌, ರಾಜಸ್ಥಾನ ವಿರುದ್ಧ 42 ಎಸೆತದಲ್ಲಿ ಔಟಾಗದೆ 76 ರನ್‌ ಸಿಡಿಸಿ ಸನ್‌ರೈಸರ್ಸ್‌ ಗೆಲುವಿಗೆ ಕಾರಣರಾಗಿದ್ದರು. ರೆಡ್ಡಿ ಮಧ್ಯಮ ವೇಗದ ಬೌಲಿಂಗ್ ಮೂಲಕವೂ ಗಮನ ಸೆಳೆದರು. ಅಷ್ಟೇ ಅಲ್ಲ, ಅವರೊಬ್ಬ ಅಮೋಘ ಫೀಲ್ಡರ್‌ ಕೂಡ ಹೌದು.