ಸಾರಾಂಶ
ಅಹಮದಾಬಾದ್: ಈ ಬಾರಿ ಐಪಿಎಲ್‌ಗೂ ಮುನ್ನ ನಡೆದ ಹರಾಜಿನಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಎಲ್ಲರ ಹುಬ್ಬೇರಿಸುವ ರೀತಿ ಬರೋಬ್ಬರಿ 24.75 ಕೋಟಿ ರು.ಗೆ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಹರಾಜಾಗಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಟೂರ್ನಿಯ ಬಹುತೇಕ ಪಂದ್ಯಗಳಲ್ಲಿ ತಮ್ಮ ಪ್ರದರ್ಶನದ ಮೂಲಕ ಭಾರಿ ಟೀಕೆ ಎದುರಿಸಿದ್ದ ಸ್ಟಾರ್ಕ್, ನಿರ್ಣಾಯಕ ಕ್ವಾಲಿಫೈಯರ್-1 ಪಂದ್ಯದಲ್ಲಿ ತಮಗೆ ಸಿಕ್ಕ ಮೊತ್ತಕ್ಕೆ ನ್ಯಾಯ ಒದಗಿಸಲು ಸಫಲರಾಗಿದ್ದಾರೆ. 2015ರ ಬಳಿಕ ಮೊದಲ ಬಾರಿ ಅಂದರೆ ಬರೋಬ್ಬರಿ 9 ವರ್ಷಗಳ ಬಳಿಕ ಐಪಿಎಲ್‌ಗೆ ಮರಳಿದ್ದ ಸ್ಟಾರ್ಕ್, ಆರಂಭಿಕ 2 ಪಂದ್ಯಗಳಲ್ಲೇ 100 ರನ್ ಬಿಟ್ಟುಕೊಟ್ಟಿದ್ದರು. ಆದರೆ ಒಂದೂ ವಿಕೆಟ್ ಬಿದ್ದಿರಲಿಲ್ಲ. ಆ ಬಳಿಕ ಲಖನೌ ವಿರುದ್ಧ 3 ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್ ಕಬಳಿಸಿದ್ದು ಬಿಟ್ಟರೆ ಇತರ ಪಂದ್ಯಗಳಲ್ಲಿ ಅವರ ಸಾಧನೆ ಅಷ್ಟಕ್ಕಷ್ಟೇ.ಆದರೆ ಕೆಕೆಆರ್ ತಮಗೇಕೆ ಬಂಪರ್ ಮೊತ್ತ ಕೊಟ್ಟಿದೆ ಎಂಬುದನ್ನು ಮಂಗಳವಾರ ಅಹಮದಾಬಾದ್‌ನಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಾಕೌಟ್ ಪಂದ್ಯದಲ್ಲಿ ತೋರಿಸಿಕೊಟ್ಟರು. ಅವರ ಬೆಂಕಿ ದಾಳಿಗೆ 2ನೇ ಎಸೆತದಲ್ಲೇ ಟ್ರ್ಯಾವಿಸ್ ಹೆಡ್ ಕ್ಲೀನ್ ಬೌಲ್ಡ್. 3ನೇ ಓವರಲ್ಲಿ ನಿತೀಶ್ ರೆಡ್ಡಿ ಹಾಗೂ ಶಾಬಾಜ್ ಅಹ್ಮದ್‌ರನ್ನೂ ಪೆವಿಲಿಯನ್‌ಗೆ ಅಟ್ಟಿ ತಾವೇಕೆ ವಿಶ್ವದ ಶ್ರೇಷ್ಠ ವೇಗಿಗಳಲ್ಲಿ ಒಬ್ಬರು ಎಂದು ತೋರಿಸಿಕೊಟ್ಟರು. ಅವರು 4 ಓವರಲ್ಲಿ 34 ರನ್ ನೀಡಿ 3 ವಿಕೆಟ್ ಕಬಳಿಸಿದರು. ಪವರ್-ಪ್ಲೇನಲ್ಲೇ ಆಕ್ರಮಣಕಾರಿ ಆಟಗಾರರನ್ನು ಕಟ್ಟಿಹಾಕಿದ ಸ್ಟಾರ್ಕ್, ತಮಗೆ ನೀಡಿದ ಜವಾಬ್ದಾರಿಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿದರು.
09 ವಿಕೆಟ್: ಮಿಚೆಲ್ ಸ್ಟಾರ್ಕ್ ಈ ಬಾರಿ ಐಪಿಎಲ್ ಪವರ್-ಪ್ಲೇನಲ್ಲಿ 9 ವಿಕೆಟ್ ಕಿತ್ತರು. ಇದು ಯಾವುದೇ ಬೌಲರ್‌ಗಳ ಪೈಕಿ 2ನೇ ಗರಿಷ್ಠ. ಭುವನೇಶ್ವರ್ 10 ವಿಕೆಟ್ ಪಡೆದಿದ್ದಾರೆ.