ಐತಿಹಾಸಿಕ ಸಾಧನೆ ಮಾಡಿದ ಚೆಸ್‌ ಸಾಧಕರನ್ನು ಭೇಟಿಯಾದ ಮೋದಿ : ಪ್ರಧಾನಿಗೆ ಚೆಸ್‌ ಬೋರ್ಡ್‌ ಗಿಫ್ಟ್

| Published : Sep 26 2024, 08:38 AM IST / Updated: Sep 26 2024, 01:36 PM IST

Chess Olympiad

ಸಾರಾಂಶ

ಇತ್ತೀಚೆಗೆ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭಾರತದ ಚದುರಂಗ ಚತುರರನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಬುಧವಾರ ಭೇಟಿ ಮಾಡಿದ್ದಾರೆ.

ನವದೆಹಲಿ: ಇತ್ತೀಚೆಗೆ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭಾರತದ ಚದುರಂಗ ಚತುರರನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಬುಧವಾರ ಭೇಟಿ ಮಾಡಿದ್ದಾರೆ.

ಡಿ.ಗುಕೇಶ್‌, ಆರ್‌.ಪ್ರಜ್ಞಾನಂದ, ಆರ್‌.ವೈಶಾಲಿ, ಅರ್ಜುನ್‌ ಎರಿಗೈಸಿ, ಡಿ.ಹರಿಕಾ, ವಿದಿತ್‌ ಗುಜರಾತಿ, ತಾನಿಯಾ ಸಚ್‌ದೇವ್‌ ಪ್ರಧಾನಿಯನ್ನು ಭೇಟಿಯಾದರು. ಈ ವೇಳೆ ಕೆಲಹೊತ್ತು ಆಟಗಾರರ ಜೊತೆ ಪ್ರಧಾನಿ ಸಂವಾದ ನಡೆಸಿ, ಚೆಸ್‌ ಒಲಿಂಪಿಯಾಡ್‌ನ ಅನುಭವಗಳನ್ನು ಕೇಳಿ ತಿಳಿದುಕೊಂಡರು. ಭವಿಷ್ಯದಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಹುರಿದುಂಬಿಸಿದರು.

ಈ ಸಂದರ್ಭ ಮೋದಿಗೆ ಆಟಗಾರರು ಚೆಸ್‌ ಬೋರ್ಡ್‌ ಉಡುಗೊರೆಯಾಗಿ ನೀಡಿದರು. ಆರ್‌.ಪ್ರಜ್ಞಾನಂದ ಹಾಗೂ ಅರ್ಜುನ್‌ ಪ್ರಧಾನಿ ಸಮ್ಮುಖದಲ್ಲಿ ಚದುರಂಗ ಆಟವನ್ನೂ ಆಡಿದರು.ಇತ್ತೀಚೆಗ ಹಂಗೇರಿಯಲ್ಲಿ ನಡೆದ 45ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತ ಪುರುಷ, ಮಹಿಳಾ ವಿಭಾಗಗಳಲ್ಲಿ ಚಿನ್ನ ಗೆದ್ದಿತ್ತು. ಇದು ಒಲಿಂಪಿಯಾಡ್‌ನಲ್ಲೇ ಭಾರತ ತಂಡಗಳ ಚೊಚ್ಚಲ ಚಿನ್ನ.

₹3.2 ಕೋಟಿ ಬಹುಮಾನ

ಚೆಸ್‌ ಒಲಿಂಪಿಯಾಡ್‌ ಗೆದ್ದ ಭಾರತ ತಂಡಕ್ಕೆ ಭಾರತ ಚೆಸ್‌ ಸಂಸ್ಥೆ ₹3.2 ಕೋಟಿ ನಗದು ಬಹುಮಾನ ಘೋಷಿಸಿದೆ. ಆಟಗಾರರಿಗೆ ತಲಾ ₹25 ಲಕ್ಷ, ಇಬ್ಬರು ಕೋಚ್‌ಗಳಗೆ ತಲಾ ₹15 ಲಕ್ಷ, ತಂಡದ ವ್ಯವಸ್ಥಾಪಕ ದಿವ್ಯೇಂದು ಬರುವಾ ₹10 ಲಕ್ಷ ಹಾಗೂ ಸಹಾಯಕ ಕೋಚ್‌ಗಳು ತಲಾ ₹7.5 ಲಕ್ಷ ನಗದು ಪಡೆಯಲಿದ್ದಾರೆ.

ಮೋದಿ ಭೇಟಿಗಾಗಿ ಬಾಕು ಟೂರ್ನಿ ಕೈಬಿಟ್ಟ ಅರ್ಜುನ್‌

ನವದೆಹಲಿ: ಅಜರ್‌ಬೈಜಾನ್‌ನ ಬಾಕು ಎಂಬಲ್ಲಿ ನಡೆಯಲಿರುವ ಚೆಸ್‌ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿದ್ದರೂ, ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗುವುದಕ್ಕಾಗಿ ಚೆಸ್‌ ಪಟು ಅರ್ಜುನ್‌ ಎರಿಗೈಸಿ ಬುಧವಾರ ಭಾರತಕ್ಕೆ ಹಿಂದಿರುಗಿದರು. ಅರ್ಜುನ್‌ ಕಳೆದ ಬಾರಿ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು. ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳುವ ಗುರಿಯೊಂದಿಗೆ ಅಜರ್‌ಬೈಜಾನ್‌ಗೆ ತೆರಳಿದ್ದರು. ಆದರೆ ಮೋದಿ ಜೊತೆ ಸಂವಾದ ನಿಗದಿಯಾದ ಕಾರಣ ಅರ್ಜುನ್‌ ಭಾರತಕ್ಕೆ ಮರಳಿದ್ದಾರೆ. ಬುಧವಾರ ಸಂಜೆ ಅವರು ಪ್ರಧಾನಿಯನ್ನು ಭೇಟಿಯಾದರು.