ಸಾರಾಂಶ
ಮಾಂಟೆ ಕಾರ್ಲೊ: ಭಾರತದ ಯುವ ಟೆನಿಸ್ ಆಟಗಾರ ಸುಮಿತ್ ನಗಾಲ್ ಮತ್ತೊಮ್ಮೆ ಟೆನಿಸ್ ಜಗತ್ತಿನ ಗಮನ ಸೆಳೆದಿದ್ದಾರೆ. ಇಲ್ಲಿ ನಡೆಯುತ್ತಿರುವ ಮಾಂಟೆ ಕಾರ್ಲೊ ಮಾಸ್ಟರ್ಸ್ ಟೂರ್ನಿಯ ಪುರುಷರ ಸಿಂಗಲ್ಸ್ 2ನೇ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.7, ಡೆನ್ಮಾರ್ಕ್‌ನ ಹೋಲ್ಗರ್ ರ್‍ಯುನೆ ವಿರುದ್ಧ ಆಕರ್ಷಕ ಪ್ರದರ್ಶನ ತೋರಿದರು.
ಬುಧವಾರ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತ್ತು. 3-6ರಲ್ಲಿ ಸುಮಿತ್ ಮೊದಲ ಸೆಟ್ ಸೋತಿದ್ದರು. ಗುರುವಾರ ಪಂದ್ಯ ಪುನಾರಂಭಗೊಂಡಿತು. ಅಮೋಘ ಪ್ರದರ್ಶನ ನೀಡಿದ ಸುಮಿತ್ 6-3 ಗೇಮ್‌ಗಳಲ್ಲಿ 2ನೇ ಸೆಟ್ ಜಯಿಸಿ, ಅಚ್ಚರಿ ಮೂಡಿಸಿದರು. ಆದರೆ 2-6ರಲ್ಲಿ 3ನೇ ಸೆಟ್ ಸೋತು, ಟೂರ್ನಿಯಿಂದ ಹೊರಬಿದ್ದರು.
2019ರ ಯುಎಸ್ ಓಪನ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ನಗಾಲ್ ಫೆಡರರ್ ವಿರುದ್ಧ ಒಂದು ಸೆಟ್ ಗೆದ್ದಿದ್ದರು.
ಫ್ರೆಂಚ್ ಓಪನ್ ಪ್ರಧಾನ ಸುತ್ತಿಗೆ ನಗಾಲ್ ಪ್ರವೇಶ!
ಕಳೆದೊಂದು ವರ್ಷದಿಂದ ಸ್ಥಿರ ಪ್ರದರ್ಶನ ತೋರುತ್ತಿರುವ ನಗಾಲ್‌ಗೆ ಈ ವರ್ಷ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್‌ನ ಪ್ರಧಾನ ಸುತ್ತಿಗೆ ಪ್ರವೇಶ ದೊರೆತಿದೆ. 2019ರಲ್ಲಿ ಪ್ರಜ್ಞೇಶ್ ಗುಣೇಶ್ವರನ್ ಬಳಿಕ ಫ್ರೆಂಚ್ ಓಪನ್ ಪ್ರಧಾನ ಸುತ್ತಿಗೆ ನೇರ ಪ್ರವೇಶ ಪಡೆದ ಭಾರತೀಯ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಮೇ 20ರಿಂದ ಗ್ರ್ಯಾನ್ ಸ್ಲಾಂ ಆರಂಭಗೊಳ್ಳಲಿದೆ.