ಸಾರಾಂಶ
ನವದೆಹಲಿ: ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಮಾರ್ನೆ ಮಾರ್ಕೆಲ್ ಭಾರತ ಕ್ರಿಕೆಟ್ ತಂಡದ ನೂತನ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬುಧವಾರ ಈ ವಿಷಯವನ್ನು ಖಚಿತಪಡಿಸಿದ್ದಾರೆ.
39 ವರ್ಷದ ಮಾರ್ಕೆಲ್‌ರನ್ನು ಬೌಲಿಂಗ್ ಕೋಚ್ ಆಗಿ ನೇಮಿಸುವಂತೆ ನೂತನ ಕೋಚ್ ಗೌತಮ್ ಗಂಭೀರ್, ಬಿಸಿಸಿಐಗೆ ಮನವಿ ಸಲ್ಲಿಸಿದ್ದರು. ಗಂಭೀರ್‌ರ ಮನವಿಗೆ ಬಿಸಿಸಿಐ ಸ್ಪಂದಿಸಿದ್ದು, ತಮ್ಮಿಚ್ಛೆಯಂತೆ ಸಹಾಯಕ ಸಿಬ್ಬಂದಿಯನ್ನು ಒದಗಿಸಿದೆ.
ಗಂಭೀರ್ ಜೊತೆ ಮಾರ್ಕೆಲ್, ಐಪಿಎಲ್‌ನ ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿ ಕೆಲಸ ಮಾಡಿದ್ದರು. ಮಾರ್ಕೆಲ್‌ರ ಕಾರ್ಯವೈಖರಿ ಬಗ್ಗೆ ಗಂಭೀರ್‌ಗೆ ಸಾಕಷ್ಟು ಗೌರವವಿದ್ದು, ಅವರ ಹೆಸರನ್ನೇ ಹುದ್ದೆಗೆ ಶಿಫಾರಸು ಮಾಡಿದ್ದರು. ಜೋ ಡೇವ್ಸ್ ಬಳಿಕ ಭಾರತ ತಂಡದ ಬೌಲಿಂಗ್ ಕೋಚ್ ಹುದ್ದೆಗೇರಿದ ವಿದೇಶಿಗ ಎನ್ನುವ ಖ್ಯಾತಿಗೆ ಮಾರ್ಕೆಲ್ ಪಾತ್ರರಾಗಿದ್ದಾರೆ. ಡೇವ್ಸ್ 2012ರಿಂದ 2014ರ ವರೆಗೂ ಬೌಲಿಂಗ್ ಕೋಚ್ ಆಗಿದ್ದರು.
ದಕ್ಷಿಣ ಆಫ್ರಿಕಾ ಪರ ಮಾರ್ಕೆಲ್ 86 ಟೆಸ್ಟ್, 117 ಏಕದಿನ ಹಾಗೂ 44 ಟಿ20 ಪಂದ್ಯಗಳನ್ನಾಡಿದ್ದಾರೆ. ಒಟ್ಟಾರೆ 544 ಅಂತಾರಾಷ್ಟ್ರೀಯ ವಿಕೆಟ್ ಅವರ ಹೆಸರಿನಲ್ಲಿದೆ.
2027ರ ಏಕದಿನ ವಿಶ್ವಕಪ್ ವರೆಗೂ ಕೋಚ್ ಹುದ್ದೆ
ಸೆಪ್ಟೆಂಬರ್ ಮೊದಲ ವಾರದಲ್ಲಿ ಬೆಂಗಳೂರಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್‌ಸಿಎ)ಗೆ ಆಗಮಿಸಿ ಹುದ್ದೆ ಸ್ವೀಕರಿಸಲಿರುವ ಮಾರ್ಕೆಲ್, ಸೆ.19ರಿಂದ ಆರಂಭಗೊಳ್ಳಲಿರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಿಂದ ತಮ್ಮ ಕೆಲಸ ಆರಂಭಿಸಲಿದ್ದಾರೆ. ಮಾರ್ಕೆಲ್‌ರ ಕೋಚಿಂಗ್ ಅವಧಿ 2027ರ ಏಕದಿನ ವಿಶ್ವಕಪ್ ವರೆಗೂ ಇರಲಿದೆ ಎಂದು ಜಯ್ ಶಾ ಖಚಿತಪಡಿಸಿದ್ದಾರೆ.