ಸಾರಾಂಶ
ಮುಂಬೈ: ತಮ್ಮ ಬಲಿಷ್ಠ ಸಿಕ್ಸರ್‌ಗಳ ಮೂಲಕವೇ ಅಭಿಮಾನಿಗಳ ಮನರಂಜಿಸುವ ಮಹೇಂದ್ರ ಸಿಂಗ್ ಧೋನಿ ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ.
ಚೆನ್ನೈ ಇನ್ನಿಂಗ್ಸ್‌ನ ಕೊನೆ 4 ಎಸೆತಗಳು ಬಾಕಿ ಇರುವಾಗ ಕ್ರೀಸ್‌ಗೆ ಆಗಮಿಸಿದ ಧೋನಿ, ಹಾರ್ದಿಕ್ ಪಾಂಡ್ಯ ಅವರ ಮೊದಲ 3 ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದರು. ಈ ಮೂಲಕ ತಮ್ಮಲ್ಲಿ ಇನ್ನೂ ಆಟ ಬಾಕಿಯಿದೆ ಎಂದು 42ರ ಧೋನಿ ತೋರಿಸಿಕೊಟ್ಟರು. ಧೋನಿ ಆಟವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಪಾರ ಪ್ರಮಾಣದ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ಪಂದ್ಯದುದ್ದಕ್ಕೂ ಧೋನಿ...ಧೋನಿ...ಘೋಷಣೆಗಳೇ ಹೆಚ್ಚಾಗಿ ಮೊಳಗಿದವು.ಧೋನಿ ಮುಂಬೈ ವಿರುದ್ಧದ 3 ಸಿಕ್ಸರ್ ಸೇರಿ ಕೊನೆ ಓವರ್ನಲ್ಲಿ ಐಪಿಎಲ್ ಇತಿಹಾಸದಲ್ಲಿ ಅವರು ಸಿಡಿಸಿದ ಸಿಕ್ಸರ್‌ಗಳ ಸಂಖ್ಯೆ 64ಕ್ಕೆ ಏರಿಕೆಯಾಗಿದೆ. ಐಪಿಎಲ್ ಇತಿಹಾಸಲ್ಲಿ 20ನೇ ಓವರ್ನಲ್ಲಿ ಧೋನಿ ಅವರು 309 ಎಸೆತಗಳನ್ನು ಎದುರಿಸಿದ್ದು, ಅತಿ ಹೆಚ್ಚು ಸಿಕ್ಸರ್ ಸಿಡಿಸದ ಬ್ಯಾಟರ್‌ಗಳ ಪಟ್ಟಿಯಲ್ಲಿ ತಮ್ಮ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
500 ಸಿಕ್ಸರ್ ಕ್ಲಬ್‌ಗೆ ರೋಹಿತ್
ರೋಹಿತ್ ಟಿ20 ಕ್ರಿಕೆಟ್‌ನಲ್ಲಿ 500 ಸಿಕ್ಸರ್ ಸಿಡಿಸಿದವ ಕ್ಲಬ್ ಸೇರ್ಪಡೆಗೊಂಡರು. ಅವರು ಈ ಸಾಧನೆ ಮಾಡಿದ 5ನೇ ಬ್ಯಾಟರ್. ವಿಂಡೀಸ್‌ನ ಕ್ರಿಸ್ ಗೇಲ್ 1056, ಪೊಲ್ಲಾರ್ಡ್ 860, ರಸೆಲ್ 678, ಕಿವೀಸ್‌ನ ಕಾಲಿನ್ ಮನ್ರೋ 548 ಸಿಕ್ಸರ್ ಸಿಡಿಸಿದ್ದಾರೆ.