ವಿಶ್ವಕಪ್‌ ಟ್ರೋಫಿ ಮುಟ್ಟಿ ಭಾವುಕರಾದ ಧೋನಿ!

| Published : Apr 14 2024, 01:55 AM IST / Updated: Apr 14 2024, 05:09 AM IST

dhoni 00.jpg

ಸಾರಾಂಶ

2011ರಲ್ಲಿ ಟೀಂ ಇಂಡಿಯಾಗೆ ತಾವು ಗೆಲ್ಲಿಸಿಕೊಟ್ಟಿದ್ದ ಐಸಿಸಿ ಏಕದಿನ ವಿಶ್ವಕಪ್‌ ಮುಟ್ಟಿ ಖುಷಿ ಪಟ್ಟ ಧೋನಿ. ಸಾಮಾಜಿಕ ತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡ ಬಿಸಿಸಿಐ. ಭಾರತ ಮತ್ತೆ ವಿಶ್ವಕಪ್‌ ಗೆಲ್ಲೋದ್ಯಾವಾಗ ಎಂದು ಅಭಿಮಾನಿಗಳ ಪ್ರಶ್ನೆ.

ಮುಂಬೈ: 2011ರಲ್ಲಿ ಭಾರತಕ್ಕೆ ಏಕದಿನ ವಿಶ್ವಕಪ್‌ ಗೆದ್ದುಕೊಟ್ಟಿದ್ದ ಎಂ.ಎಸ್‌.ಧೋನಿ, ಶನಿವಾರ ಇಲ್ಲಿನ ವಾಂಖೇಡೆ ಕ್ರೀಡಾಂಗಣದ ಆವರಣದಲ್ಲಿರುವ ಬಿಸಿಸಿಐ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರು.

ಭಾನುವಾರ ವಾಂಖೇಡೆ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್‌ ಪಂದ್ಯವನ್ನು ಆಡಲಿದೆ. ಶನಿವಾರ ಎಂ.ಎಸ್‌.ಧೋನಿ, ವಾಂಖೇಡೆ ಕ್ರೀಡಾಂಗಣಕ್ಕೆ ಅಭ್ಯಾಸ ನಡೆಸಲು ಆಗಮಿಸಿದ್ದರು.

ಈ ವೇಳೆ ಕಚೇರಿಯಲ್ಲಿ ಇಟ್ಟಿರುವ ವಿಶ್ವಕಪ್‌ ಟ್ರೋಫಿಯನ್ನು ಮುಟ್ಟಿ ಧೋನಿ ಭಾವುಕರಾದರು ಎಂದು ತಿಳಿದುಬಂದಿದೆ. ಧೋನಿ ಟ್ರೋಫಿಯನ್ನು ಮುಟ್ಟುತ್ತಿರುವ ಫೋಟೋಗಳನ್ನು ಬಿಸಿಸಿಐ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದು, ವೈರಲ್‌ ಆಗಿವೆ.

ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದಿದ್ದ 2011ರ ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ ಗೆದ್ದು 28 ವರ್ಷಗಳ ಬಳಿಕ ಟ್ರೋಫಿಗೆ ಮುತ್ತಿಟ್ಟಿತ್ತು.

ನುವಾನ್‌ ಕುಲಶೇಖರ ಅವರ ಎಸೆತವನ್ನು ಸಿಕ್ಸರ್‌ಗಟ್ಟಿದ್ದ ಧೋನಿ, ಭಾರತವನ್ನು ವಿಶ್ವ ಚಾಂಪಿಯನ್‌ಪಟ್ಟಕ್ಕೇರಿಸಿದ್ದರು. ಧೋನಿಯ ಆ ಸಿಕ್ಸರ್‌ ಅನ್ನು ಕ್ರಿಕೆಟ್‌ ಅಭಿಮಾನಿಗಳು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ.