ಮುಂಬೈ ದೇಸಿ ಕ್ರಿಕೆಟಿಗರ ಸಂಭಾವನೆ ಇನ್ನು ಡಬಲ್‌!

| Published : Mar 24 2024, 01:40 AM IST

ಸಾರಾಂಶ

ಈ ವರೆಗೂ ಪಂದ್ಯಕ್ಕೆ ಸಂಭಾವನೆಯನ್ನು ಬಿಸಿಸಿಐ ಮಾತ್ರ ಕೊಡುತ್ತಿತ್ತು. ರಾಜ್ಯ ಸಂಸ್ಥೆಗಳು ಆಟಗಾರರಿಗೆ ದೈನಂದಿನ ಭತ್ಯೆ ನೀಡುತ್ತಿದ್ದವು. ಮೊದಲ ಬಾರಿ ರಾಜ್ಯ ಸಂಸ್ಥೆಯೊಂದು ಸಂಭಾವನೆ ನೀಡಲಿದೆ.

ಮುಂಬೈ: ಆಟಗಾರರನ್ನು ದೇಸಿ ಕ್ರಿಕೆಟ್‌ನತ್ತ ಆಕರ್ಷಿಸಲು ಮುಂಬೈ ಕ್ರಿಕೆಟ್‌ ಸಂಸ್ಥೆ(ಎಂಸಿಎ) ಮಹತ್ವದ ಹೆಜ್ಜೆ ಇಟ್ಟಿದ್ದು, ಪ್ರತಿ ಪಂದ್ಯಕ್ಕೆ ಆಟಗಾರನಿಗೆ ಬಿಸಿಸಿಐ ನೀಡುವ ಸಂಭಾವನೆಯಷ್ಟೇ ಮೊತ್ತವನ್ನು ಪಾವತಿಸುವುದಾಗಿ ತಿಳಿಸಿದೆ. ಈ ವರೆಗೂ ರಾಜ್ಯ ಸಂಸ್ಥೆಗಳು ಆಟಗಾರರಿಗೆ ದೈನಂದಿನ ಭತ್ಯೆ ಮಾತ್ರ ನೀಡುತ್ತಿತ್ತು. ಆದರೆ ಬಿಸಿಸಿಐ ಪಂದ್ಯಕ್ಕೆ ಸಂಭಾವನೆ ನೀಡುತ್ತಿತ್ತು. ಪ್ರತಿ ಆಟಗಾರನಿಗೆ ಸದ್ಯ ಬಿಸಿಸಿಐನಿಂದ ದಿನಕ್ಕೆ ₹40000ದಿಂದ ₹60000 ವರೆಗೆ ಸಂಭಾವನೆ ಸಿಗುತ್ತಿದೆ. ಅಂದರೆ ಪ್ರತಿ ರಣಜಿ ಪಂದ್ಯಕ್ಕೆ ಆಟಗಾರನಿಗೆ ₹2 ಲಕ್ಷಕ್ಕೂ ಅಧಿಕ ಮೊತ್ತ ಲಭಿಸುತ್ತಿದೆ. ಇನ್ನು ಅಷ್ಟೇ ಮೊತ್ತವನ್ನು ಮುಂಬೈ ಆಟಗಾರರಿಗೆ ಎಂಸಿಎ ಕೂಡಾ ಪಾವತಿಸಲಿದೆ.

ಐಪಿಎಲ್‌: ರಿಂಕು ಸೇರಿ ನಾಲ್ವರ ವೇತನ ಹೆಚ್ಚಳ

ನವದೆಹಲಿ: ಐಪಿಎಲ್‌ನಲ್ಲಿ ಆಡುತ್ತಿರುವ ಭಾರತದ ಐವರು ಯುವ ಆಟಗಾರರ ವೇತನ ಹೆಚ್ಚಳವಾಗಲಿದೆ. ಬಿಸಿಸಿಐ ನಿಯಮದ ಪ್ರಕಾರ ಐಪಿಎಲ್‌ ಹರಾಜಿನಲ್ಲಿ ಆಯ್ಕೆಯಾದಾಗ ಇನ್ನೂ ಭಾರತ ತಂಡದ ಪರ ಆಡದೆ, ಆ ಬಳಿಕ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಆಟಗಾರರಿಗೆ ವೇತನ ಹೆಚ್ಚಳಗೊಳ್ಳಲಿದೆ. ಈ ನಿಯಮದ ಪ್ರಕಾರ ರಿಂಕು ಸಿಂಗ್‌, ಜಿತೇಶ್‌ ಶರ್ಮಾ, ಸಾಯಿ ಸುದರ್ಶನ್‌ ಹಾಗೂ ರಜತ್‌ ಪಾಟೀದಾರ್‌ರ ವೇತನವನ್ನು ಬಿಸಿಸಿಐ ಪರಿಷ್ಕರಿಸಲಿದೆ. 55 ಲಕ್ಷ ರು. ವೇತನ ಪಡೆಯುತ್ತಿರುವ ರಿಂಕುಗೆ 1 ಕೋಟಿ ರು. ಸಿಗಲಿದ್ದು, ತಲಾ 20 ಲಕ್ಷ ರು. ಗಳಿಸುತ್ತಿರುವ ಉಳಿದ ಮೂವರ ವೇತನ 50 ಲಕ್ಷ ರು.ಗೆ ಹೆಚ್ಚಳಗೊಳ್ಳಲಿದೆ.