ಇಂದು ಫೈನಲ್‌ ಹಣಾಹಣಿ - ಮುಂಬೈ vs ಡೆಲ್ಲಿ: ಯಾರ ಮುಡಿಗೆ 3ನೇ ಆವೃತ್ತಿಯ ಡಬ್ಲ್ಯುಪಿಎಲ್‌ ಕಿರೀಟ ?

| N/A | Published : Mar 15 2025, 01:01 AM IST / Updated: Mar 15 2025, 04:25 AM IST

ಸಾರಾಂಶ

ಇಂದು ಫೈನಲ್‌ ಹಣಾಹಣಿ: ಎರಡನೇ ಬಾರಿ ಟ್ರೋಫಿ ಗೆಲ್ಲುವ ಕಾತರದಲ್ಲಿ ಮುಂಬೈ ಇಂಡಿಯನ್ಸ್‌. ಸತತ 3ನೇ ಫೈನಲ್‌ ಆಡುತ್ತಿರುವ ಡೆಲ್ಲಿ. 2023ರಲ್ಲಿ ಮುಂಬೈ ವಿರುದ್ಧವೇ ಫೈನಲ್‌ನಲ್ಲಿ ಸೋತಿದ್ದ ತಂಡಕ್ಕೆ ಮೊದಲ ಕಪ್‌ ಗುರಿ

ಮುಂಬೈ: 3ನೇ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್ ಲೀಗ್‌(ಡಬ್ಲ್ಯುಪಿಎಲ್‌) ಟಿ20 ಟೂರ್ನಿಯ ಫೈನಲ್‌ ಹಣಾಹಣಿಗೆ ಕ್ಷಣಗಣನೆ ಆರಂಭಗೊಂಡಿದೆ. ಮುಂಬೈನ ಬ್ರೆಬೋರ್ನ್‌ ಕ್ರೀಡಾಂಗಣದಲ್ಲಿ ಶನಿವಾರ ಪ್ರಶಸ್ತಿ ಕದನ ನಡೆಯಲಿದ್ದು, ಟ್ರೋಫಿಗಾಗಿ ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಪರಸ್ಪರ ಸೆಣಸಾಡಲಿವೆ. 

ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಮುಂಬೈ ತಂಡ ತವರಿನಲ್ಲಿ 2ನೇ ಟ್ರೋಫಿ ಗೆಲ್ಲುವ ಕಾತರದಲ್ಲಿದೆ. ಆಸ್ಟ್ರೇಲಿಯಾದ ಮೆಗ್‌ ಲ್ಯಾನಿಂಗ್‌ ಸಾರಥ್ಯದ ಡೆಲ್ಲಿ ತಂಡ ಕಳೆದೆರಡು ಬಾರಿಯ ಫೈನಲ್‌ ಸೋಲಿನ ಕಹಿ ನೆನಪನ್ನು ಮರೆತು ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದೆ. 

ರೋಚಕ ಪೈಪೋಟಿ: ಡಬ್ಲ್ಯುಪಿಎಲ್‌ನ ಒಟ್ಟಾರೆ ದಾಖಲೆ ಹಾಗೂ ಈ ಬಾರಿ ಟೂರ್ನಿಯ ಪ್ರದರ್ಶನ ಗಮನಿಸಿದರೆ ಮುಂಬೈ ತಂಡ ಟ್ರೋಫಿ ಗೆಲ್ಲುವ ಫೇವರಿಟ್‌ ಎನಿಸಿದರೂ, ಡೆಲ್ಲಿ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಹೆಚ್ಚು. ಶೀವರ್‌ ಬ್ರಂಟ್‌ ಹಾಗೂ ಹೇಲಿ ಮ್ಯಾಥ್ಯೂಸ್‌ ಮುಂಬೈನ ಆಧಾರಸ್ತಂಭ. ಶೀವರ್‌ ಈ ಸಲ 493 ರನ್‌ ಕಲೆಹಾಕಿದ್ದು, ಗರಿಷ್ಠ ರನ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 

ಬೌಲಿಂಗ್‌ನಲ್ಲೂ ಮಿಂಚಿರುವ ಅವರು 9 ವಿಕೆಟ್‌ ಕಿತ್ತಿದ್ದಾರೆ. ಹೇಲಿ ಮ್ಯಾಥ್ಯೂಸ್‌ 304 ರನ್‌ ಗಳಿಸಿ 3ನೇ ಸ್ಥಾನದಲ್ಲಿದ್ದಾರೆ. ಇವರ ಹೊರತಾಗಿ ಹರ್ಮನ್‌ಪ್ರೀತ್‌ ಕೌರ್‌(236 ರನ್‌) ಕೂಡಾ ತಂಡಕ್ಕೆ ಬಲ ಒದಗಿಸಲಿದ್ದಾರೆ.ಇನ್ನು ಬೌಲಿಂಗ್‌ ವಿಭಾಗದಲ್ಲಿ ಗರಿಷ್ಠ ವಿಕೆಟ್‌ ಕಿತ್ತ ದಾಖಲೆಯೂ ಹೇಲಿ ಹೆಸರಲ್ಲಿದೆ. ಅವರು 17 ವಿಕೆಟ್‌ ಪಡೆದಿದ್ದಾರೆ. ಅಮೇಲಿ ಕೇರ್‌(16 ವಿಕೆಟ್‌)ಗೆ ಈ ಪಟ್ಟಿಯಲ್ಲಿ 2ನೇ ಸ್ಥಾನ. ಇವರ ಜೊತೆಗೆ ಶಬ್ನಿಮ್‌ ಇಸ್ಮಾಯಿಲ್‌, ಅಮನ್‌ಜೋತ್‌ ಕೌರ್‌ ಕೂಡಾ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಲ್ಲರು. ಎಲ್ಲಕ್ಕಿಂತ ಮುಖ್ಯವಾಗಿ ಸಂಘಟಿತ ಆಟವಾಡುವುದು ಮುಂಬೈನ ಪ್ಲಸ್‌ಪಾಯಿಂಟ್.

ಸೇಡು ತೀರಿಸುತ್ತಾ ಡೆಲ್ಲಿ: ಮುಂಬೈಗೆ ಹೋಲಿಸಿದರೆ ಡೆಲ್ಲಿ ತಂಡ ಕೆಲವೇ ಆಟಗಾರ್ತಿಯರ ಮೇಲೆ ಅವಲಂಬಿವಾಗಿದೆ. ಶಫಾಲಿ ವರ್ಮಾ(300 ರನ್‌), ಮೆಗ್‌ ಲ್ಯಾನಿಂಗ್‌(263) ಬ್ಯಾಟಿಂಗ್‌ ಆಧಾರಸ್ತಂಭ. ಜೆಮಿಮಾ ರೋಡ್ರಿಗ್ಸ್, ಮಾರಿಯನ್‌ ಕಾಪ್‌, ಅನಾಬೆಲ್‌ ಸುಥರ್‌ಲೆಂಡ್‌ ಫೈನಲ್‌ನಲ್ಲಾದರೂ ತಂಡದ ಕೈಹಿಡಿಯಬೇಕಿದೆ. ಬೌಲಿಂಗ್‌ನಲ್ಲಿ ಜೆಸ್‌ ಜೊನಾಸನ್‌(11 ವಿಕೆಟ್‌), ಶಿಖಾ ಪಾಂಡೆ(11 ವಿಕೆಟ್‌) ತಂಡದ ಬಲ. ಇವರಿಬ್ಬರ ಮೇಲೇ ತಂಡ ಹೆಚ್ಚಿನ ಭರವಸೆ ಇಟ್ಟುಕೊಂಡಿದೆ.

ಸಂಭವನೀಯ ಆಟಗಾರರು

ಮುಂಬೈ: ಹೇಲಿ, ಅಮೇಲಿ, ಶೀವರ್‌ ಬ್ರಂಟ್‌, ಹರ್ಮನ್‌ಪ್ರೀತ್‌(ನಾಯಕಿ), ಅಮನ್‌ಜೋತ್‌, ಯಸ್ತಿಕಾ, ಸಜನಾ, ಕಮಲಿನಿ, ಸಂಸ್ಕೃತಿ ಗುಪ್ತಾ, ಶಬ್ನಿಮ್‌, ಶೈಕಾ ಇಸಾಕ್‌ಡೆಲ್ಲಿ: ಲ್ಯಾನಿಂಗ್‌(ನಾಯಕಿ), ಶಫಾಲಿ, ಜೆಮಿಮಾ, ಅನಾಬೆಲ್‌, ಮಾರಿಯನ್‌, ಜೊನಾಸನ್‌, ಸಾರಾ ಬ್ರೈಸ್‌, ನಿಕಿ ಪ್ರಸಾದ್‌, ಮಿನ್ನು ಮಣಿ, ಶಿಕಾ ಪಾಂಡೆ, ಟಿಟಾಸ್‌ ಸಧು.ಪಂದ್ಯ: ರಾತ್ರಿ 7.30ಕ್ಕೆ । ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋಹಾಟ್‌ಸ್ಟಾರ್‌. 

ಈ ಬಾರಿ ಡೆಲ್ಲಿ ವಿರುದ್ಧ ಮುಂಬೈಗೆ 2 ಸೋಲು

ಈ ಬಾರಿ ಟೂರ್ನಿಯ ಲೀಗ್‌ ಹಂತದಲ್ಲಿ ಮುಂಬೈ ಹಾಗೂ ಡೆಲ್ಲಿ ತಂಡಗಳು 2 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಎರಡು ಪಂದ್ಯದಲ್ಲೂ ಡೆಲ್ಲಿ ಗೆಲುವು ಸಾಧಿಸಿದೆ.

 02 ಬಾರಿ

ಮುಂಬೈ ತಂಡ ಡಬ್ಲ್ಯುಪಿಎಲ್‌ನಲ್ಲಿ 2ನೇ ಬಾರಿ ಫೈನಲ್‌ ಆಡುತ್ತಿದೆ. 2023ರಲ್ಲಿ ತಂಡ ಗೆಲುವು ಸಾಧಿಸಿತ್ತು.