ಐಪಿಎಲ್‌ಗೆ 2 ದಿನ ಬಾಕಿ
ಈ ಬಾರಿ ಐಪಿಎಲ್‌ಗೆ ಸಜ್ಜಾಗುತ್ತಿರುವ 10 ತಂಡಗಳ ಪೈಕಿ 6 ತಂಡಗಳ ಕುರಿತ ವಿಶ್ಲೇಷಣೆಯನ್ನು ‘ಕನ್ನಡಪ್ರಭ’ ಪತ್ರಿಕೆಯು ಕಳೆದೆರಡು ದಿನಗಳಲ್ಲಿ ನಿಮ್ಮ ಮುಂದಿಟ್ಟಿತ್ತು. ಉಳಿದ 4 ತಂಡಗಳಾದ ಐಪಿಎಲ್‌ನ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್, ಚೊಚ್ಚಲ ಆವೃತ್ತಿಯ ಕಪ್ ವಿಜೇತ ರಾಜಸ್ಥಾನ ರಾಯಲ್ಸ್, 2016ರ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಒಮ್ಮೆಯೂ ಟ್ರೋಫಿ ಗೆಲ್ಲದ ಪಂಜಾಬ್ ಕಿಂಗ್ಸ್ ತಂಡಗಳ ಬಲಾಬಲ ಬಗ್ಗೆ ಇಂದಿನ ಸಂಚಿಕೆಯಲ್ಲಿ ಸಮಗ್ರ ವಿವರ ನೀಡಲಾಗಿದೆ.
ಮುಂಬೈ ಇಂಡಿಯನ್ಸ್(ಎಂಐ)
ಕಳೆದ ಆವೃತ್ತಿ: 3ನೇ ಸ್ಥಾನ
2020ರಲ್ಲಿ ಕೊನೆ ಬಾರಿ ಚಾಂಪಿಯನ್ ಆಗಿರುವ ಮುಂಬೈ ಕಳೆದ ಬಾರಿ ಪ್ಲೇ-ಆಫ್‌ಗೇರಿತ್ತಾದರೂ ಕಪ್ ಬರ ನೀಗಿರಲಿಲ್ಲ. ಉತ್ತಮ ಪ್ರದರ್ಶನ ಹೊರತಾಗಿಯೂ ಕ್ವಾಲಿಫೈಯರ್-2ರಲ್ಲಿ ಸೋತಿತ್ತು.
2026ರಲ್ಲಿ ಹೇಗಿದೆ ತಂಡ?
ಕೆಲ ಬದಲಾವಣೆ ಹೊರತುಪಡಿಸಿ ಮುಂಬೈ ತಂಡದಲ್ಲಿ ಈ ಹಿಂದಿನ ತಾರಾಗಣವೇ ಇದೆ. ಬ್ಯಾಟಿಂಗ್ ಲೈನ್-ಅಪ್ ಬಲಿಷ್ಠವಾಗಿದೆ. ರೋಹಿತ್ ಜೊತೆ ಆರಂಭಿಕರಾಗಿ ರಿಕೆಲ್ಟನ್ ಅಥವಾ ಕ್ವಿಂಟನ್ ಡಿ ಕಾಕ್ ಆಡಲಿದ್ದಾರೆ. ಬಳಿಕ ಸೂರ್ಯಕುಮಾರ್, ತಿಲಕ್ ವರ್ಮಾ, ನಾಯಕ ಹಾರ್ದಿಕ್ ಪಾಂಡ್ಯ ಬಲ ತಂಡಕ್ಕೆ ಸಿಗಲಿದೆ. ಇತ್ತೀಚೆಗಷ್ಟೇ ಟಿ20 ವಿಶ್ವಕಪ್‌ನಲ್ಲಿ ಮಿಂಚಿದ್ದ ವಿಲ್ ಜ್ಯಾಕ್ಸ್, ಮಿಚೆಲ್ ಸ್ಯಾಂಟ್ನರ್ ಆಲ್ರೌಂಡ್ ಪ್ರದರ್ಶನ ತಂಡದ ಪಾಲಿಗೆ ಟ್ರಂಪ್‌ಕಾರ್ಡ್ಸ್. ವಿಶ್ವ ಶ್ರೇಷ್ಠ ವೇಗಿ ಜಸ್‌ಪ್ರೀತ್ ಬೂಮ್ರಾ ಜೊತೆ ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಕೂಡಾ ಎದುರಾಳಿ ಬ್ಯಾಟರ್‌ಗಳನ್ನು ಕಾಡಬಲ್ಲರು. ದೀಪಕ್ ಚಹರ್, ಶಾರ್ದೂಲ್ ಠಾಕೂರ್ ಕೂಡಾ ತಂಡಕ್ಕೆ ನಿರ್ಣಾಯಕ ಕೊಡುಗೆ ನೀಡಬಲ್ಲರು.
ದೌರ್ಬಲ್ಯ ಏನು?
ತಂಡ ಸಮತೋಲಿತವಾಗಿ ಕಂಡುಬಂದರೂ ಕೆಲ ಸಮಸ್ಯೆಗಳಿವೆ. ಅನುಭವಿ ಭಾರತೀಯ ವಿಕೆಟ್ ಕೀಪರ್ ತಂಡದಲ್ಲಿಲ್ಲ. ಸ್ಯಾಂಟ್ನರ್ ಹೊರತಾಗಿ ತಂಡಕ್ಕೆ ಪ್ರಬಲ ಸ್ಪಿನ್ನರ್ ಕೊರತೆ ಎದುರಾಗಬಹುದು. ಬೂಮ್ರಾ, ಹಾರ್ದಿಕ್ ಹಾಗೂ ದೀಪಕ್ ಚಹರ್ ಗಾಯ, ಫಿಟ್ನೆಸ್ ಸಮಸ್ಯೆ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು.
ಅತ್ಯುತ್ತಮ 12 ಆಯ್ಕೆ:
ರೋಹಿತ್, ಡಿ ಕಾಕ್/ರಿಕೆಲ್ಟನ್, ಸೂರ್ಯಕುಮಾರ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ವಿಲ್ ಜ್ಯಾಕ್ಸ್, ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹರ್, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬೂಮ್ರಾ, ಶಾರ್ದೂಲ್ ಠಾಕೂರ್
ಪಂಜಾಬ್ ಕಿಂಗ್ಸ್(ಪಿಬಿಕೆಎಸ್)
ಕಳೆದ ಆವೃತ್ತಿ: ರನ್ನರ್-ಅಪ್
ಬರೋಬ್ಬರಿ 10 ಆವೃತ್ತಿಗಳ ಬಳಿಕ ಕಳೆದ ವರ್ಷ ಅಮೋಘ ಪ್ರದರ್ಶನ ತೋರಿದ್ದ ಪಂಜಾಬ್ ಫೈನಲ್‌ವರೆಗೂ ತಲುಪಿತ್ತು. ಆದರೆ ಚೊಚ್ಚಲ ಕಪ್ ಗೆಲುವಿನ ಕನಸಿಗೆ ಆರ್‌ಸಿಬಿ ಅಡ್ಡಿಪಡಿಸಿತ್ತು.
2026ರಲ್ಲಿ ಹೇಗಿದೆ ತಂಡ?
ಹೆಚ್ಚೂ ಕಡಿಮೆ ಕಳೆದ ವರ್ಷದ ತಂಡವನ್ನೇ ಪಂಜಾಬ್ ಕಿಂಗ್ಸ್ ಈ ಬಾರಿಯೂ ಉಳಿಸಿಕೊಂಡಿದೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಯುವ ಪ್ರತಿಭೆಗಳೇ ಹೆಚ್ಚಿದ್ದಾರೆ. 2025ರಲ್ಲಿ ಪ್ರಭ್‌ಸಿಮ್ರನ್, ಪ್ರಿಯಾನ್ಸ್ ಆರ್ಯ, ಶ್ರೇಯಸ್, ಶಶಾಂಕ್ ಸಿಂಗ್ ಹಾಗೂ ನೇಹಲ್ ವಧೇರಾ ತಂಡದ ಅಗ್ರ-5 ಬ್ಯಾಟರ್‌ಗಳಾಗಿದ್ದರು. ಎಲ್ಲರೂ ತಲಾ 350+ ರನ್ ಕಲೆಹಾಕಿ ತಂಡವನ್ನು ಫೈನಲ್‌ಗೇರಿಸಿದ್ದರು. ಈ ಬಾರಿಯೂ ಬ್ಯಾಟಿಂಗ್ ವಿಭಾಗದಲ್ಲಿ ಸಮತೋಲನ ಕಾಯ್ದುಕೊಂಡಿದೆ. ಸ್ಟೋಯ್ನಿಸ್, ಮಾರ್ಕೊ ಯಾನ್ಸನ್, ಕೂಪರ್ ಕೊನೊಲಿ ತಂಡದ ಆಲ್ರೌಂಡ್ ಬಲ. ಭಾರತದ ಪರ ಅಂತಾರಾಷ್ಟ್ರೀಯ ಟಿ20ಯ ಗರಿಷ್ಠ ವಿಕೆಟ್ ಸರದಾರರ ಪಟ್ಟಿಯಲ್ಲಿರುವ ವೇಗಿ ಅರ್ಶ್‌ದೀಪ್, ಸ್ಪಿನ್ನರ್ ಚಹಲ್ ಈ ಬಾರಿಯೂ ತಂಡಕ್ಕೆ ಆಧಾರಸ್ತಂಭವಾಗಬಹುದು.
ದೌರ್ಬಲ್ಯ ಏನು?
ಅನುಭವಿ ಆಟಗಾರರ ಕೊರತೆ ಈ ಬಾರಿಯೂ ತಂಡಕ್ಕೆ ಮುಳುವಾಗಬಹುದು. ಕೊನೊಲಿ, ಮುಶೀರ್, ಅವಿನಾಶ್, ಹರ್ನೂರ್, ಸೂರ್ಯಾನ್ಶ್, ಮಿಚೆಲ್ ಓವನ್, ಪ್ರವೀಣ್ ದುಬೆ, ವಿಶಾಲ್ ವಿನೋದ್ ಸೇರಿ ಹಲವು ಅನನುಭವಿಗಳು ತಂಡದಲ್ಲಿ ಇದ್ದಾರೆ. ಸ್ಪಿನ್ ವಿಭಾಗ ಚಹಲ್‌ರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದು ತಂಡದ ಮತ್ತೊಂದು ಸಮಸ್ಯೆ.
ಅತ್ಯುತ್ತಮ 12 ಆಯ್ಕೆ:
ಪ್ರಭ್‌ಸಿಮ್ರನ್, ಪ್ರಿಯಾನ್ಸ್ ಆರ್ಯ, ಶ್ರೇಯಸ್ ಅಯ್ಯರ್(ನಾಯಕ), ಶಶಾಂಕ್ ಸಿಂಗ್, ನೇಹಲ್ ವಧೇರಾ, ಮಾರ್ಕಸ್ ಸ್ಟೋಯ್ನಿಸ್, ಕೂಪರ್ ಕೊನೊಲಿ, ಮಾರ್ಕೊ ಯಾನ್ಸನ್, ಚಹಲ್, ಅರ್ಶ್‌ದೀಪ್, ಫರ್ಗ್ಯೂಸನ್, ಹರ್‌ಪ್ರೀತ್/ಅಜ್ಮತುಲ್ಲಾ.
ಸನ್‌ರೈಸರ್ಸ್ ಹೈದರಾಬಾದ್(ಎಸ್‌ಆರ್‌ಎಚ್)
ಕಳೆದ ಆವೃತ್ತಿ: 6ನೇ ಸ್ಥಾನ
ಆಕ್ರಮಣಕಾರಿ ಬ್ಯಾಟಿಂಗ್ ಹೊರತಾಗಿಯೂ ಕಳೆದ ಬಾರಿ ತಂಡ ಗೆದ್ದಿದ್ದು ಕೇವಲ 6 ಪಂದ್ಯ. ಲೀಗ್‌ನ ಕೊನೆಯಲ್ಲಿ ಸತತ 3 ಪಂದ್ಯ ಗೆಲ್ಲುವ ಮೂಲಕ ತಂಡ ಮತ್ತಷ್ಟು ಅವಮಾನದಿಂದ ಪಾರಾಗಿತ್ತು.
2026ರಲ್ಲಿ ಹೇಗಿದೆ ತಂಡ?
ಇತ್ತೀಚೆಗೆ ₹25.50 ಕೋಟಿ ಇಟ್ಟುಕೊಂಡು ಹರಾಜಿಗೆ ತೆರಳಿದ್ದ ಸನ್‌ರೈಸರ್ಸ್ ತಂಡ, ಇಂಗ್ಲೆಂಡ್ ಟಿ20 ಟೀಮ್‌ನಿಂದ ಹೊರಬಿದ್ದಿರುವ ಆಲ್ರೌಂಡರ್ ಲಿವಿಂಗ್‌ಸ್ಟೋನ್‌ರನ್ನು ಬರೋಬ್ಬರಿ ₹13 ಕೋಟಿಗೆ ಖರೀದಿಸಿತ್ತು. ಅವರು ಈ ಬಾರಿ ಅಬ್ಬರಿಸಿದರೆ ಪುಣ್ಯ. ಉಳಿದಂತೆ ತಂಡದಲ್ಲಿರುವ ಬಹುತೇಕರು ಆಕ್ರಮಣಕಾರಿ ಆಟಗಾರರು. ಅಭಿಷೇಕ್, ಟ್ರ್ಯಾವಿಸ್ ಹೆಡ್, ಇಶಾನ್ ಕಿಶನ್, ಕ್ಲಾಸೆನ್, ಲಿವಿಂಗ್‌ಸ್ಟೋನ್ ಜೊತೆ ಕರ್ನಾಟಕದ ಯುವ ತಾರೆ ಆರ್.ಸ್ಮರಣ್ ತಂಡದಲ್ಲಿದ್ದಾರೆ. ಅನಿಕೇತ್ ವರ್ಮಾ, ಸಲೀಲ್ ಅರೋರಾ ಅವರಂತಹ ದೇಸಿ ತಾರೆಗಳೂ ಜೊತೆಗಿದ್ದಾರೆ. ಉನಾದ್ಕಟ್, ಹರ್ಷಲ್ ಪಟೇಲ್, ಜೀಶಾನ್ ಅನ್ಸಾರಿ, ಶಿವಂ ಮಾವಿ ಸೇರಿದಂತೆ ಪ್ರಮುಖ ದೇಸಿ ಪ್ರತಿಭೆಗಳು ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ.
ದೌರ್ಬಲ್ಯ ಏನು?
ನಾಯಕ ಕಮಿನ್ಸ್ ಕೆಲ ಪಂದ್ಯಗಳಿಗೆ ಗೈರಾಗಲಿರುವುದು ತಂಡದ ಚಿಂತೆ ಹೆಚ್ಚಿಸಲಿದೆ. ಅವರ ಅನುಪಸ್ಥಿತಿಯಲ್ಲಿ ಎಶಾನ್ ಮಾಲಿಂಗಾ, ಬ್ರೈಡನ್ ಕಾರ್ಸ್, ಉನಾದ್ಕಟ್ ಮೇಲೆ ಒತ್ತಡ ಬೀಳಬಹುದು. ಆಕ್ರಮಣಕಾರಿ ಬ್ಯಾಟರ್‌ಗಳಿದ್ದರೂ ದಿಢೀರ್ ಕುಸಿಯುವುದು ತಂಡದ ಪ್ರಮುಖ ಸಮಸ್ಯೆ. ಇದು ಈ ಬಾರಿ ಮರುಕಳಿಸದಂತೆ ನೋಡಬೇಕಿದೆ.
ಅತ್ಯುತ್ತಮ 12 ಆಯ್ಕೆ
ಟ್ರ್ಯಾವಿಸ್ ಹೆಡ್, ಅಭಿಷೇಕ್, ಇಶಾನ್ ಕಿಶನ್(ನಾಯಕ), ನಿತೀಶ್ ಕುಮಾರ್, ಕ್ಲಾಸೆನ್, ಲಿವಿಂಗ್‌ಸ್ಟೋನ್, ಸಲೀಲ್ ಅರೋರಾ/ ಸ್ಮರಣ್, ಕಾರ್ಸ್, ಹರ್ಷ್ ದುಬೆ, ಹರ್ಷಲ್, ಶಿವಂ ಮಾವಿ/ಜೀಶಾನ್ ಅನ್ಸಾರಿ, ಜಯ್‌ದೇವ್ ಉನಾದ್ಕಟ್.
ರಾಜಸ್ಥಾನ ರಾಯಲ್ಸ್(ಆರ್‌ಆರ್)
ಕಳೆದ ಆವೃತ್ತಿ: 9ನೇ ಸ್ಥಾನ
2024ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಾಜಸ್ಥಾನ, ಕಳೆದ ಬಾರಿ ತೀರಾ ವೈಫಲ್ಯ ಕಂಡಿತ್ತು. ಆಡಿದ 14 ಪಂದ್ಯಗಳ ಪೈಕಿ ಕೇವಲ 4ರಲ್ಲಿ ಗೆದ್ದಿತ್ತು. ನೆಟ್ ರನ್‌ರೇಟ್‌ನಿಂದಾಗಿ ಕೊನೆ ಸ್ಥಾನಕ್ಕೆ ಕುಸಿಯುವುದರಿಂದ ಪಾರಾಗಿತ್ತು.
2026ರಲ್ಲಿ ಹೇಗಿದೆ ತಂಡ?
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ತಂಡದಲ್ಲಿ ಮಹತ್ವದ ಬದಲಾವಣೆಗಳಾಗಿವೆ. 2026ರ ಹರಾಜಿಗೂ ಮುನ್ನ ತನ್ನ ದೀರ್ಘಕಾಲದ ನಾಯಕ ಸಂಜು ಸ್ಯಾಮ್ಸನ್‌ರನ್ನೇ ಚೆನ್ನೈಗೆ ಮಾರಾಟ ಮಾಡಿ, ಜಡೇಜಾ ಹಾಗೂ ಸ್ಯಾಮ್ ಕರನ್‌ರನ್ನು ಖರೀದಿಸಿತ್ತು. ಬಳಿಕ ಸಂಜು ಟಿ20 ವಿಶ್ವಕಪ್‌ನಲ್ಲಿ ಅಬ್ಬರಿಸಿ ಭಾರತಕ್ಕೆ ಕಪ್ ಗೆಲ್ಲಿಸಿಕೊಡಲು ನೆರವಾಗಿದ್ದರು. ಈ ಬಾರಿ ಸಂಜು ಬದಲು ರಿಯಾನ್ ಪರಾಗ್ ನಾಯಕತ್ವ ವಹಿಸಲಿದ್ದಾರೆ. ತಂಡದಲ್ಲಿರುವ ಬಹುತೇಕರು ಯುವ ಆಟಗಾರರು. ವೈಭವ್ ಸೂರ್ಯವಂಶಿ ಮೇಲೆ ಎಲ್ಲರ ಕಣ್ಣಿದ್ದು, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ಹೆಟ್ಮೇಯರ್ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಕಾದು ನೋಡಬೇಕಿದೆ. ರವೀಂದ್ರ ಜಡೇಜಾ ಪ್ರದರ್ಶನ ತಂಡಕ್ಕೆ ನಿರ್ಣಾಯಕ.
ದೌರ್ಬಲ್ಯ ಏನು?
ಜೈಸ್ವಾಲ್, ವೈಭವ್, ರಿಯಾನ್ ಸೇರಿದಂತೆ ಅಗ್ರ ಬ್ಯಾಟಿಂಗ್ ಕ್ರಮಾಂಕ ಅನುಭವದ ಕೊರತೆ ಎದುರಿಸುತ್ತಿದೆ. ಹೆಟ್ಮೇಯರ್ ಜೊತೆ ಫೆರಿಯೆರಾ ಫಿನಿಶರ್ ಆಗಿ ಆಡಬಲ್ಲರಾದರೂ ಐಪಿಎಲ್‌ನಲ್ಲಿ ಅವರಿಗೆ ಹೆಚ್ಚಿನ ಅನುಭವವಿಲ್ಲ. ರಿಯಾನ್ ನಾಯಕತ್ವದಲ್ಲಿ ಜಡೇಜಾ ಸೇರಿ ಹಿರಿಯ ಆಟಗಾರರು ಯಾವ ರೀತಿ ಆಡಲಿದ್ದಾರೆ ಎಂಬ ಕುತೂಹಲವಿದೆ.
ಅತ್ಯುತ್ತಮ 12 ಆಯ್ಕೆ:
ಜೈಸ್ವಾಲ್, ವೈಭವ್ ಸೂರ್ಯವಂಶಿ, ರಿಯಾನ್ ಪರಾಗ್(ನಾಯಕ), ಧ್ರುವ್ ಜುರೆಲ್, ಹೆಟ್ಮೇಯರ್, ಫೆರಿಯೆರಾ, ರವೀಂದ್ರ ಜಡೇಜಾ, ನಂಡ್ರೆ ಬರ್ಗರ್, ಜೋಫ್ರಾ ಆರ್ಚರ್, ರವಿ ಬಿಷ್ಣೋಯ್, ಸಂದೀಪ್ ಶರ್ಮಾ, ವಿಘ್ನೇಶ್ ಪುತೂರ್.