ಸಾರಾಂಶ
ಮುಂಬೈ: ಟೂರ್ನಿಯುದ್ದಕ್ಕೂ ಅಭೂತಪೂರ್ವ ಪ್ರದರ್ಶನ ತೋರಿ, ಫೈನಲ್‌ನಲ್ಲೂ ಎದುರಾಳಿ ಮೇಲೆ ಸಂಪೂರ್ಣ ಅಧಿಪತ್ಯ ಸಾಧಿಸಿದ್ದ ಮುಂಬೈ ನಿರೀಕ್ಷೆಯಂತೆಯೇ ರಣಜಿ ಟ್ರೋಫಿ ರಾಷ್ಟ್ರೀಯ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 42ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರೊಂದಿಗೆ 3ನೇ ಬಾರಿ ಪ್ರಶಸ್ತಿ ಗೆಲ್ಲುವ ವಿದರ್ಭದ ಕನಸು ಭಗ್ನಗೊಂಡಿತು.
ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದ 2ನೇ ದಿನವೇ ಹಿನ್ನಡೆ ಅನುಭವಿಸಿದ್ದ ವಿದರ್ಭ ಕೊನೆ ದಿನದವರೆಗೂ ಹೋರಾಟ ಕೈಬಿಟ್ಟಿರಲಿಲ್ಲ.
ಆದರೆ ಮುಂಬೈನ ಬ್ಯಾಟಿಂಗ್ ಪರಾಕ್ರಮ, ಬೌಲರ್‌ಗಳ ಶಿಸ್ತುಬದ್ಧ ದಾಳಿ ಮುಂದೆ ಮಂಡಿಯೂರಿದ ವಿದರ್ಭ 169 ರನ್ ಸೋಲನುಭವಿಸಿತು.
48ನೇ ಬಾರಿ ಫೈನಲ್‌ಗೇರಿದ್ದ ಮುಂಬೈ 8 ವರ್ಷಗಳ ಬಳಿಕ ಪ್ರಶಸ್ತಿ ಬರ ನೀಗಿಸಿದರೆ, 3ನೇ ಬಾರಿ ಫೈನಲ್‌ಗೇರಿದ್ದ ವಿದರ್ಭ ಪ್ರಶಸ್ತಿ ತಪ್ಪಿಸಿಕೊಂಡಿತು.
ಮೊದಲ ಇನ್ನಿಂಗ್ಸ್‌ನಲ್ಲಿ 119 ರನ್‌ಗಳ ಹಿನ್ನಡೆ ಅನುಭವಿಸಿದ್ದ ವಿದರ್ಭಕ್ಕೆ ಮುಂಬೈ ನೀಡಿದ ಗೆಲುವಿನ ಗುರಿ 538. ಗುರಿ ಅಸಾಧ್ಯ ಎನಿಸಿದ್ದರೂ ವಿದರ್ಭ ಹೋರಾಟದಿಂದ ಹಿಂದೆ ಸರಿಯಲಿಲ್ಲ.
4ನೇ ದಿನದಂದತ್ಯಕ್ಕೆ 5 ವಿಕೆಟ್‌ಗೆ 248 ರನ್ ಕಲೆಹಾಕಿದ್ದ ವಿದರ್ಭಕ್ಕೆ ಕೊನೆ ದಿನವಾದ ಗುರುವಾರ 290 ರನ್ ಬೇಕಿತ್ತು. ಮುಂಬೈಗೆ ಅಗತ್ಯವಿದ್ದಿದ್ದು 5 ವಿಕೆಟ್.
ಅಕ್ಷಯ್ ಹೋರಾಟದ ಶತಕ: ಕೊನೆ ದಿನಕ್ಕೆ ಹರ್ಷ್ ದುಬೆ ಜೊತೆ ಕ್ರೀಸ್ ಕಾಯ್ದುಕೊಂಡಿದ್ದ ನಾಯಕ ಅಕ್ಷಯ್ ವಾಡ್ಕರ್ ಮುಂಬೈ ಬೌಲರ್‌ಗಳನ್ನು ಆರಂಭದಲ್ಲಿ ಇನ್ನಿಲ್ಲದಂತೆ ಕಾಡಿದರು.
6ನೇ ವಿಕೆಟ್‌ಗೆ ಜೊತೆಗೂಡಿದ್ದ ಅಕ್ಷಯ್ ಹಾಗೂ ದುಬೆ 130 ರನ್ ಸೇರಿಸಿ ಮುಂಬೈಗೆ ಗೆಲುವನ್ನು ಇನ್ನಷ್ಟು ತಡ ಮಾಡಿದರು. ಆದರೆ ತಂಡದ ಮೊತ್ತ 353 ರನ್ ಆಗಿದ್ದಾಗ ಅಕ್ಷಯ್ ವಿಕೆಟನ್ನು ತನುಶ್ ಕೋಟ್ಯಾನ್ ಉರುಳಿಸುವುದರೊಂದಿಗೆ ಮುಂಬೈ ಸೋಲು ಖಚಿತವಾಯಿತು.
ಅಕ್ಷಯ್ 102 ರನ್ ಗಳಿಸಿ ನಿರ್ಗಮಿಸಿದ ಬೆನ್ನಲ್ಲೇ, 65 ರನ್ ಸಿಡಿಸಿದ್ದ ಹರ್ಷ್ ದುಬೆ ಅವರು ತುಷಾರ್ ದೇಶಪಾಂಡೆಗೆ ವಿಕೆಟ್ ಒಪ್ಪಿಸಿದರು. ಉಳಿದ 3 ವಿಕೆಟ್‌ಗಳನ್ನು ಉರುಳಿಸಲು ಮುಂಬೈ ಬೌಲರ್‌ಗಳಿಗೆ ಹೆಚ್ಚಿನ ಸಮಯ ಬೇಕಾಗಲಿಲ್ಲ.
ತಂಡ 368 ರನ್ ಗಳಿಸಿದ್ದಾಗ ಸರ್ವಪತನ ಕಂಡಿತು. ತನುಶ್ 4 ವಿಕೆಟ್ ಕಿತ್ತರೆ, ತುಷಾರ್, ಮುಶೀರ್ ಖಾನ್ ತಲಾ 2 ವಿಕೆಟ್ ಪಡೆದರು.ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಮುಂಬೈ 224 ರನ್ ಗಳಿಸಿ, ಬಳಿಕ ವಿದರ್ಭವನ್ನು 105 ರನ್‌ಗೆ ನಿಯಂತ್ರಿಸಿತ್ತು.
ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ ಮುಂಬೈ ಬರೋಬ್ಬರಿ 418 ರನ್ ಕಲೆಹಾಕಿತ್ತು.ಸ್ಕೋರ್: ಮುಂಬೈ 224/10 ಮತ್ತು 418/10, ವಿದರ್ಭ 105/10 ಮತ್ತು 368/10 (ಅಕ್ಷಯ್ 102, ಹರ್ಷ್ 65, ತನುಶ್ 4-95, ಮುಶೀರ್ 2-48, ತುಷಾರ್ 2-53)
ಮುಂಬೈಗೆ ₹10 ಕೋಟಿ ನಗದು ಬಹುಮಾನ: ಚಾಂಪಿಯನ್ ಮುಂಬೈ ತಂಡಕ್ಕೆ ಬಿಸಿಸಿಐನ 5 ಕೋಟಿ ರು. ಜೊತೆಗೆ ಮುಂಬೈ ಕ್ರಿಕೆಟ್ ಸಂಸ್ಥೆ ಹೆಚ್ಚುವರಿ 5 ಕೋಟಿ ರು. ನಗದು ಬಹುಮಾನ ನೀಡಿತು. ರನ್ನರ್-ಅಪ್ ವಿದರ್ಭ ತಂಡ 3 ಕೋಟಿ ರು. ಬಹುಮಾನ ಪಡೆಯಿತು.