ಹಿಂಸಾಚಾರ ವೇಳೆ ವ್ಯಕ್ತಿಯ ಕೊಲೆ ಪ್ರಕರಣ. ಘಟನೆಗೆ ಸಂಬಂಧಿಸಿದಂತೆ ಶೇಕ್‌ ಹಸೀನಾ, ಶಕೀಬ್‌ ಸೇರಿ ಒಟ್ಟು 147 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ನವದೆಹಲಿ: ಸದಾ ಒಂದಿಲ್ಲೊಂದು ವಿವಾದಗಳ ಮೂಲಕವೇ ಸುದ್ದಿಯಾಗುವ ಬಾಂಗ್ಲಾದೇಶದ ಹಿರಿಯ ಕ್ರಿಕೆಟಿಗ ಶಕೀಬ್‌ ಅಲ್‌ ಹಸನ್‌ ವಿರುದ್ಧ ಈಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಾಗಿದೆ. 37 ವರ್ಷದ ಶಕೀಬ್‌ ಬಾಂಗ್ಲಾದೇಶದ ಶೇಕ್‌ ಹಸೀನಾ ಸರ್ಕಾರದಲ್ಲಿ ಸಂಸದರಾಗಿದ್ದರು. ಇತ್ತೀಚೆಗೆ ಹಸೀನಾ ಸರ್ಕಾರದ ವಿರುದ್ಧ ನಡೆಯುತ್ತಿದ್ದ ಹಿಂಸಾತ್ಮಕ ಪ್ರತಿಭಟನೆ ವೇಳೆ ರುಬೆಲ್‌ ಎಂಬವರ ಕೊಲೆ ನಡೆದಿತ್ತು. 

ಈ ಪ್ರಕರಣದಲ್ಲಿ ಶಕೀಬ್‌ ಕೈವಾಡವಿದೆ ಎಂದು ಅಡಾಬೊರ್‌ ಪೊಲೀಸ್‌ ಠಾಣೆಯಲ್ಲಿ ರುಬೆಲ್‌ರ ತಂದೆ ದೂರು ಸಲ್ಲಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಶೇಕ್‌ ಹಸೀನಾ, ಶಕೀಬ್‌ ಸೇರಿ ಒಟ್ಟು 147 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಆಗಸ್ಟ್‌ 7ರಂದು ರುಬೆಲ್‌ರ ಕೊಲೆ ನಡೆದಿತ್ತು. ಆದರೆ ಶಕೀಬ್‌ ಜು.26ರಿಂದ ಆ.9ರ ವರೆಗೆ ಕೆನಡಾದಲ್ಲಿದ್ದರು. ಅಂದರೆ ಶಕೀಬ್‌ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿಲ್ಲ. ಆದರೆ ಮಗನ ಕೊಲೆಯಲ್ಲಿ ಪರೋಕ್ಷವಾಗಿ ಭಾಗಿಯಾದ ಆರೋಪದ ಮೇಲೆ ಶಕೀಬ್‌ ವಿರುದ್ಧ ಕೇಸ್‌ ದಾಖಲಾಗಿದೆ ಎಂದು ತಿಳಿದುಬಂದಿದೆ.

ಟೆಸ್ಟ್‌: ಪಾಕಿಸ್ತಾನ ವಿರುದ್ಧ ಬಾಂಗ್ಲಾ ದಿಟ್ಟ ಹೋರಾಟ

ರಾವಲ್ಪಿಂಡಿ: ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶ ದಿಟ್ಟ ಹೋರಾಟ ಪ್ರದರ್ಶಿಸುತ್ತಿದೆ. ಪಾಕ್‌ನ 448 ರನ್‌ಗೆ ಉತ್ತರವಾಗಿ ಬ್ಯಾಟ್‌ ಮಾಡುತ್ತಿರುವ ಬಾಂಗ್ಲಾ 3ನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 316 ರನ್‌ ಕಲೆಹಾಕಿದೆ. ತಂಡ ಇನ್ನು 132 ರನ್‌ ಹಿನ್ನಡೆಯಲ್ಲಿದೆ. ಶಾದ್ಮನ್‌ ಇಸ್ಲಾಮ್‌ 93, ಮೊಮಿನುಲ್‌ ಹಕ್‌ 50 ರನ್‌ ಗಳಿಸಿದರು. ಮುಷ್ಫಿಕುರ್‌ ರಹೀಂ(ಔಟಾಗದೆ 55) ಹಾಗೂ ಲಿಟನ್‌ ದಾಸ್‌(ಔಟಾಗದೆ 52) 4ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.