ತಮ್ಮ ದಾಖಲೆಗಳನ್ನು ಯಾರೂ ಮುರಿಯುವ ನಿರೀಕ್ಷೆ ಇಲ್ಲ : ಉಸೇನ್‌ ಬೋಲ್ಟ್‌

| Published : May 18 2024, 12:36 AM IST / Updated: May 18 2024, 04:17 AM IST

ಸಾರಾಂಶ

ಸತತ 3 ಒಲಿಂಪಿಕ್ಸ್‌ಗಳಲ್ಲಿ 100 ಮೀ., 200 ಮೀ., ಓಟದಲ್ಲಿ ಚಿನ್ನ ಗೆದ್ದ ಏಕೈಕ ಅಥ್ಲೀಟ್‌ ಎನ್ನುವ ದಾಖಲೆಯೂ ಉಸೇನ್‌ ಬೋಲ್ಟ್‌ ಹೆಸರಿನಲ್ಲಿದೆ.

ನವದೆಹಲಿ: ಅತಿವೇಗವಾಗಿ 100 ಮೀ. ಹಾಗೂ 200 ಮೀ. ಓಟ ಪೂರ್ತಿಗೊಳಿಸಿದ ವಿಶ್ವ ದಾಖಲೆ ಹೊಂದಿರುವ ಜಮೈಕಾದ ಉಸೇನ್‌ ಬೋಲ್ಟ್‌, ಸದ್ಯಕ್ಕೆ ತಮ್ಮ ದಾಖಲೆಗಳನ್ನು ಯಾರೂ ಮುರಿಯುವ ನಿರೀಕ್ಷೆ ಇಲ್ಲ ಎಂದಿದ್ದಾರೆ. 

ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿರುವ ಬೋಲ್ಟ್‌, ‘ಸದ್ಯಕ್ಕೆ ನನ್ನ ದಾಖಲೆಗಳು ಸುರಕ್ಷಿತ. ಈಗಿರುವ ಅಥ್ಲೀಟ್‌ಗಳ ಪೈಕಿ ಯಾರಿಂದಲೂ ನನ್ನ ದಾಖಲೆ ಮುರಿಯಲು ಆಗುವುದಿಲ್ಲ ಎಂಬ ನಂಬಿಕೆ ನನಗಿದೆ. 

ಇನ್ನೂ ಕೆಲ ವರ್ಷಗಳ ಕಾಲ ದಾಖಲೆಗಳು ನನ್ನ ಹೆಸರಲ್ಲೇ ಇರಲಿವೆ’ ಎಂದಿದ್ದಾರೆ. 100 ಮೀ. ಓಟವನ್ನು 9.58 ಸೆಕೆಂಡ್‌, 200 ಮೀ. ಓಟವನ್ನು 19.19 ಸೆಕೆಂಡ್‌ಗಳಲ್ಲಿ ಬೋಲ್ಟ್‌ ಪೂರ್ತಿಗೊಳಿಸಿ ವಿಶ್ವ ದಾಖಲೆ ಬರೆದಿದ್ದರು. ಸತತ 3 ಒಲಿಂಪಿಕ್ಸ್‌ಗಳಲ್ಲಿ 100 ಮೀ., 200 ಮೀ., ಓಟದಲ್ಲಿ ಚಿನ್ನ ಗೆದ್ದ ಏಕೈಕ ಅಥ್ಲೀಟ್‌ ಎನ್ನುವ ದಾಖಲೆಯೂ ಬೋಲ್ಟ್‌ ಹೆಸರಿನಲ್ಲಿದೆ.

ನಿವೃತ್ತಿಗೆ ಮುನ್ನ ಕೊಹ್ಲಿಯ ಜೊತೆ ಮಾತನಾಡಿದ್ದೆ: ಸುನಿಲ್‌ ಚೆಟ್ರಿ

ಬೆಂಗಳೂರು: ಗುರುವಾರ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ ಭಾರತದ ದಿಗ್ಗಜ ಆಟಗಾರ ಸುನಿಲ್‌ ಚೆಟ್ರಿ, ನಿವೃತ್ತಿ ನಿರ್ಧಾರ ಕೈಗೊಳ್ಳುವ ಮುನ್ನ ವಿರಾಟ್‌ ಕೊಹ್ಲಿಯ ಜೊತೆ ಮಾತನಾಡಿ, ಅವರ ಸಲಹೆ ಕೇಳಿದ್ದೆ ಎಂದು ಹೇಳಿದ್ದಾರೆ. ಈ ಬಗ್ಗೆ ವರ್ಚುವಲ್‌ ಸಂದರ್ಶನದಲ್ಲಿ ಮಾತನಾಡಿದ ಚೆಟ್ರಿ, ‘ಕೊಹ್ಲಿ ನನ್ನ ಉತ್ತಮ ಸ್ನೇಹಿತ. ನನ್ನನ್ನು ಅವರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ ನಿವೃತ್ತಿ ಬಗ್ಗೆ ಅವರೊಂದಿಗೆ ಚರ್ಚಿಸಿದ್ದೆ’ ಎಂದಿದ್ದಾರೆ. ಇದಕ್ಕೂ ಮುನ್ನ ಆರ್‌ಸಿಬಿಯ ಸಂದರ್ಶನದಲ್ಲಿ ಕೊಹ್ಲಿ ಕೂಡಾ ‘ಸುನಿಲ್‌ ಚೆಟ್ರಿ ತಮ್ಮಲ್ಲಿ ನಿವೃತ್ತಿ ಬಗ್ಗೆ ಮಾತುಕತೆ ನಡೆಸಿದ್ದಾರೆ’ ಎಂದು ತಿಳಿಸಿದ್ದರು. ಭಾರತ ಪರ 150 ಪಂದ್ಯಗಳನ್ನಾಡಿರುವ ಚೆಟ್ರಿ, ಜೂ.6ರಂದು ಕೊನೆ ಬಾರಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲಿದ್ದಾರೆ.