ರ್‍ಯಾಂಕಿಂಗ್‌: 80ನೇ ಸ್ಥಾನಕ್ಕೆ ಸುಮಿತ್‌

| Published : Apr 14 2024, 01:53 AM IST / Updated: Apr 14 2024, 05:12 AM IST

ಸಾರಾಂಶ

ಟೆನಿಸ್‌ ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 13 ಸ್ಥಾನ ಮೇಲೇರಿದ ಭಾರತದ ಯುವ ಟೆನಿಸಿಗ ಸುಮಿತ್‌ ನಗಾಲ್‌. ಸೋಮವಾರ ಪ್ರಕಟಗೊಳ್ಳಲಿರುವ ಪರಿಷ್ಕೃತ ಪಟ್ಟಿಯಲ್ಲಿ 80ನೇ ಸ್ಥಾನ ಪಡೆಯಲಿರುವ ಸುಮಿತ್‌.

ಲಂಡನ್‌: ಭಾರತದ ಯುವ ಟೆನಿಸ್‌ ಆಟಗಾರ ಸುಮಿತ್‌ ನಗಾಲ್‌, ಎಟಿಪಿ ಟೆನಿಸ್‌ ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 13 ಸ್ಥಾನ ಮೇಲೇರಿ 80ನೇ ಸ್ಥಾನ ಪಡೆಯಲಿದ್ದಾರೆ. ಸೋಮವಾರ ಪರಿಷ್ಕೃತ ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆಯಾಗಲಿದೆ.

ಇತ್ತೀಚೆಗಷ್ಟೇ ನಗಾಲ್‌, ಪ್ರತಿಷ್ಠಿತ ಮಾಂಟೆ ಕಾರ್ಲೋ ಟೂರ್ನಿಯಲ್ಲಿ 2ನೇ ಸುತ್ತು ಪ್ರವೇಶಿಸಿ, ವಿಶ್ವ ನಂ.7 ಹೋಲ್ಗರ್‌ ರ್‍ಯುನೆ ವಿರುದ್ಧ ಒಂದು ಸೆಟ್‌ ಗೆದ್ದಿದ್ದರು. ಮೊದಲ ಸುತ್ತಿನಲ್ಲಿ ವಿಶ್ವ ನಂ. 38 ಮ್ಯಾಟಿಯೋ ಅರ್ನಾಲ್ಡಿ ವಿರುದ್ಧ ಜಯ ಸಾಧಿಸಿದ್ದರು.

ಅಲ್ಲದೇ ಮುಂದಿನ ತಿಂಗಳು ಆರಂಭಗೊಳ್ಳಲಿರುವ ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೂರ್ನಿಗೂ ನೇರ ಪ್ರವೇಶ ಪಡೆದಿದ್ದಾರೆ.

ಸುಮಿತ್‌ ಕಳೆದೊಂದು ವರ್ಷದಿಂದ ಅಮೋಘ ಪ್ರದರ್ಶನ ನೀಡುತ್ತಿದ್ದು, ಟೂರ್ನಿಯಿಂದ ಟೂರ್ನಿಗೆ ಅವರ ಪ್ರದರ್ಶನ ಗುಣಮಟ್ಟ ಸುಧಾರಿಸುತ್ತಿದೆ. ಫ್ರೆಂಚ್‌ ಓಪನ್‌ನಲ್ಲೂ ಉತ್ತಮ ಆಟವಾಡಿ, ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಮತ್ತಷ್ಟು ಸ್ಥಾನ ಮೇಲೇರುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಕಳೆದ ವರ್ಷ ಸುಮಿತ್‌ ತಾವು ಎದುರಿಸುತ್ತಿರುವ ಹಣಕಾಸಿನ ಸಮಸ್ಯೆಯ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಅಳಲು ತೋಡಿಕೊಂಡಿದ್ದರು. ಇದೀಗ ಮಾಂಟೆ ಕಾರ್ಲೋ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಸುಮಿತ್‌ಗೆ ಹೈದರಾಬಾದ್‌ನ ಉದ್ಯಮಿಯೊಬ್ಬರು 10 ಲಕ್ಷ ರು. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.