ಸಾರಾಂಶ
ಡೆಹ್ರಾಡೂನ್/ಹಲ್ದ್ವಾನಿ: 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಪ್ರಾಬಲ್ಯ ಮುಂದುವರಿಸಿದೆ. ಮಂಗಳವಾರ ಮುಕ್ತಾಯಗೊಂಡ ಈಜು ಸ್ಪರ್ಧೆಗಳಲ್ಲಿ ಕರ್ನಾಟಕ ಪುರುಷ, ಮಹಿಳಾ ಎರಡೂ ವಿಭಾಗಗಳಲ್ಲಿ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಶ್ರೀಹರಿ ನಟರಾಜ್ ಹಾಗೂ ಧಿನಿಧಿ ದೇಸಿಂಘು, ತಲಾ 9 ಚಿನ್ನದ ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದರು.
ಕೊನೆಯ ದಿನವಾದ ಮಂಗಳಾರ 14 ವರ್ಷದ ಧಿನಿಧಿ, ಮಹಿಳೆಯರ 100 ಮೀ. ಫ್ರೀ ಸ್ಟೈಲ್ ಸ್ಪರ್ಧೆಯನ್ನು 57.34 ಸೆಕೆಂಡ್‌ಗಳಲ್ಲಿ ಪೂರ್ತಿಗೊಳಿಸಿ ರಾಷ್ಟ್ರೀಯ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. 2023ರಲ್ಲಿ ಗೋವಾದಲ್ಲಿ ನಡೆದಿದ್ದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ತಾವೇ ನಿರ್ಮಿಸಿದ್ದ ದಾಖಲೆ (57.87 ಸೆಕೆಂಡ್)ಯನ್ನು ಉತ್ತಮಗೊಳಿಸಿಕೊಂಡರು. ಇನ್ನು, ಪುರುಷರ 100 ಮೀ. ಫ್ರೀ ಸ್ಟೈಲ್‌ನಲ್ಲಿ 50.65 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ ಶ್ರೀಹರಿ ನಟರಾಜ್ ಚಿನ್ನ ಜಯಿಸಿದರು.ಬಳಿಕ, ಶ್ರೀಹರಿ ಹಾಗೂ ಧಿನಿಧಿ ಸೇರಿಕೊಂಡು 4X100 ಮೀ. ಮೆಡ್ಲೆ ರಿಲೇಯಲ್ಲಿ ಚಿನ್ನ ಜಯಿಸಿದರು. 4 ನಿಮಿಷ 3.91 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ತಂಡದಲ್ಲಿ ವಿಧಿತ್ ಶಂಕರ್ ಹಾಗೂ ನೈಶಾ ಶೆಟ್ಟಿ ಸಹ ಇದ್ದರು. ಈಜಿನಲ್ಲಿ ರಾಜ್ಯಕ್ಕೆ ದಿನದ ಮೊದಲ ಚಿನ್ನವನ್ನು ವಿಧಿತ್ ಶಂಕರ್ ಗೆದ್ದುಕೊಟ್ಟರು. ಪುರುಷರ 100 ಮೀ. ಬ್ರೆಸ್ಟ್‌ಸ್ಟ್ರೋಕ್ ವಿಭಾಗದಲ್ಲಿ ವಿಧಿತ್, 1 ನಿಮಿಷ 3.97 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಜಯಿಸಿದರು. ಈಜಿನಲ್ಲಿ ಕರ್ನಾಟಕ 22 ಚಿನ್ನ, 10 ಬೆಳ್ಳಿ, 5 ಕಂಚಿನೊಂದಿಗೆ ಒಟ್ಟು 37 ಪದಕ ಜಯಿಸಿ ಚಾಂಪಿಯನ್ ಆಯಿತು. 5 ಚಿನ್ನ, 11 ಬೆಳ್ಳಿ ಹಾಗೂ 12 ಕಂಚು ಪಡೆದ ಮಹಾರಾಷ್ಟ್ರ 2ನೇ ಸ್ಥಾನಿಯಾಯಿತು.---
ಶ್ರೀಹರಿ, ಧಿನಿಧಿ ಕೂಟದಶ್ರೇಷ್ಠ ಕ್ರೀಡಾಪಟುಗಳು!
ಶ್ರೀಹರಿ ನಟರಾಜ್ ಹಾಗೂ ಧಿನಿಧಿ ದೇಸಿಂಘು ಕೂಟದ ಶ್ರೇಷ್ಠ ಕ್ರೀಡಾಪಟುಗಳು ಪ್ರಶಸ್ತಿ ಜಯಿಸಿದರು. ಶ್ರೀಹರಿ ಒಟ್ಟು 10 ಪದಕ ಗೆದ್ದರೆ, ಧಿನಿಧಿ ಒಟ್ಟು 11 ಪದಕಗಳಿಗೆ ಕೊರಳೊಡ್ಡಿದರು. 2023ರಲ್ಲೂ ಶ್ರೀಹರಿ ಶ್ರೇಷ್ಠ ಕ್ರೀಡಾಪಟು ಗೌರವ ಪಡೆದಿದ್ದರು. ಆ ವರ್ಷ 8 ಚಿನ್ನ, 1 ಬೆಳ್ಳಿ, 1 ಕಂಚು ಗೆದ್ದಿದ್ದರು.---ಬ್ಯಾಡ್ಮಿಂಟನ್‌ನಲ್ಲಿ ರಾಜ್ಯಕ್ಕೆ 3 ಚಿನ್ನ!
ರಾಷ್ಟ್ರೀಯ ಗೇಮ್ಸ್‌ನ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲೂ ರಾಜ್ಯ ಭರ್ಜರಿ ಸಾಧನೆ ಮಾಡಿದೆ. ಪುರುಷರ ತಂಡ ವಿಭಾಗದಲ್ಲಿ ಚಿನ್ನ ಜಯಿಸಿದ್ದ ಕರ್ನಾಟಕ, ಇದೀಗ ಪುರುಷ, ಮಹಿಳಾ ಡಬಲ್ಸ್‌ನಲ್ಲ ಚಿನ್ನ ಬಾಚಿಕೊಂಡಿದೆ. ಒಟ್ಟಾರೆ ಬ್ಯಾಡ್ಮಿಂಟನ್‌ನಲ್ಲಿ ರಾಜ್ಯಕ್ಕೆ 6 ಪದಕ ಸಿಕ್ಕಿದೆ.ಕರ್ನಾಟಕದ ಎರಡು ಜೋಡಿಗಳ ನಡುವೆ ನಡೆದ ಪುರುಷರ ಡಬಲ್ಸ್ ಫೈನಲ್‌ನಲ್ಲಿ ನಿತಿಶ್ ಎಚ್‌ವಿ ಹಾಗೂ ಪ್ರಕಾಶ್ ರಾಜ್ 21-16, 21-14ರಲ್ಲಿ ವೈಭವ್ ಹಾಗೂ ಆಶಿತ್ ಸೂರ್ಯರನ್ನು ಸೋಲಿಸಿದರು. ಮಹಿಳಾ ಡಬಲ್ಸ್ ಫೈನಲ್‌ನಲ್ಲಿ ರಾಜ್ಯದ ಶಿಖಾ ಗೌತಮ್ ಹಾಗೂ ಅಶ್ವಿನಿ ಭಟ್ ಜೋಡಿಯು ಉತ್ತರಾಖಂಡದ ಏಂಜೆಲ್ ಪುನೇರಾ ಹಾಗೂ ಆನ್ಯಾ ಬಿಶ್ತ್ ವಿರುದ್ಧ 21-11, 21-13 ಗೇಮ್‌ಗಳಲ್ಲಿ ಜಯಿಸಿತು.
ಮಿಶ್ರ ಡಬಲ್ಸ್‌ನಲ್ಲಿ ಆಶಿತ್ ಸೂರ್ಯ-ಅಮೃತಾ ಪ್ರಮುತೇಶ್, ಪುರುಷರ ಸಿಂಗಲ್ಸ್‌ನಲ್ಲಿ ಸನೀತ್ ದಯಾನಂದ್ ಕಂಚು ಪಡೆದರು.----
ಕಯಾಕಿಂಗ್, ಯೋಗಾಸನಸ್ಪರ್ಧೆಗಳಲ್ಲೂ ರಾಜ್ಯಕ್ಕೆ ಪದಕ
ಪುರುಷರ ಕೆನೋಯಿಂಗ್ ಹಾಗೂ ಕಯಾಕಿಂಗ್‌ನ ಸ್ಲಾಲೊಮ್ ಕೆ1 ವಿಭಾಗದಲ್ಲಿ ನಾಗೇಶ್ ನಾಯ್ಕ್ ಬೆಳ್ಳಿ ಜಯಿಸಿದರೆ, ಪುರುಷರ ಸಂಪ್ರದಾಯಿಕ ಯೋಗಾಸನದಲ್ಲಿ ಭರತ್ ರಾಮ ಗೌಡ ಕಂಚಿನ ಪದಕ ಪಡೆದರು.