9 ದೇಶಗಳಲ್ಲಿ 5 ವಿಕೆಟ್‌ ಗೊಂಚಲು: ವಾರ್ನ್‌, ಮುರಳೀಧರನ್‌ ಸಾಲಿಗೆ ಲಯನ್‌

| Published : Mar 04 2024, 01:19 AM IST

ಸಾರಾಂಶ

ನೇಥನ್‌ ಲಯನ್‌ ಅವರು ಆಸ್ಟ್ರೇಲಿಯಾ, ಭಾರತ, ಇಂಗ್ಲೆಂಡ್‌, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ವೆಸ್ಟ್‌ಇಂಡೀಸ್‌, ದಕ್ಷಿಣ ಆಫ್ರಿಕಾ ಬಳಿಕ ಕಿವೀಸ್‌ ನೆಲದಲ್ಲೂ 5 ವಿಕೆಟ್‌ ಕಿತ್ತ ಸಾಧನೆ ಮಾಡಿದರು.

ವೆಲ್ಲಿಂಗ್ಟನ್‌: ಆಸ್ಟ್ರೇಲಿಯಾದ ಹಿರಿಯ ಸ್ಪಿನ್ನರ್‌ ನೇಥನ್‌ ಲಯನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 9 ದೇಶಗಳಲ್ಲಿ 5 ವಿಕೆಟ್ ಗೊಂಚಲು ಪಡೆದ ವಿಶ್ವದ 3ನೇ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಲಯನ್‌ 6 ವಿಕೆಟ್‌ ಕಿತ್ತರು. ಈ ಮೂಲಕ ಆಸ್ಟ್ರೇಲಿಯಾ, ಭಾರತ, ಇಂಗ್ಲೆಂಡ್‌, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ವೆಸ್ಟ್‌ಇಂಡೀಸ್‌, ದಕ್ಷಿಣ ಆಫ್ರಿಕಾ ಬಳಿಕ ಕಿವೀಸ್‌ ನೆಲದಲ್ಲೂ 5 ವಿಕೆಟ್‌ ಕಿತ್ತ ಸಾಧನೆ ಮಾಡಿದರು. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹಾಗೂ ಆಸ್ಟ್ರೇಲಿಯಾದ ಶೇನ್‌ ವಾರ್ನ್‌ ಕೂಡಾ 9 ದೇಶಗಳಲ್ಲಿ 5 ವಿಕೆಟ್‌ ಗೊಂಚಲು ಪಡೆದಿದ್ದರು. ಪಾಕಿಸ್ತಾನದ ವಾಸಿಂ ಅಕ್ರಂ ಹಾಗೂ ವಖಾರ್‌ ಯೂನಿಸ್‌, ದಕ್ಷಿಣ ಆಫ್ರಿಕಾದ ಡೇಲ್‌ ಸ್ಟೇಯ್ನ್‌ 8 ದೇಶಗಳಲ್ಲಿ ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ ಪಡೆದಿದ್ದಾರೆ.

ಬಾಕ್ಸಿಂಗ್‌: ನರೇಂದರ್‌, ದೀಪಕ್‌ಗೆ ಸೋಲಿನ ಶಾಕ್‌

ಬುಸ್ಟೊ ಅರ್ಸಿಜಿಯೊ(ಇಟಲಿ): ಇಲ್ಲಿ ಆರಂಭಗೊಂಡ ಪ್ಯಾರಿಸ್‌ ಒಲಿಂಪಿಕ್ಸ್‌ನ ಬಾಕ್ಸಿಂಗ್‌ ಅರ್ಹತಾ ಟೂರ್ನಿಯಲ್ಲಿ ಭಾರತೀಯರು ಮೊದಲ ದಿನ ನಿರಾಸೆ ಅನುಭವಿಸಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ ಪದಕ ವಿಜೇತೆ ದೀಪಕ ಬೋರಿಯಾ ಭಾನುವಾರ ಪುರುಷರ 51 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲಿ ಅಜರ್‌ಬೈಜಾನ್‌ನ ಹುಸೈನೊವ್‌ ನಿಜಾತ್‌ ವಿರುದ್ಧ 2-3 ಅಂಕಗಳಿಂದ ಸೋತರು. ಪುರುಷರ 91+ ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ನರೇಂದರ್‌ ಬರ್ವಾಲ್‌ ಅವರು ಜರ್ಮನಿಯ ಟಿಯಾಫಕ್‌ ನೆಲ್ವೀ ವಿರುದ್ಧ 0-5 ಅಂತರದಲ್ಲಿ ಪರಾಭವಗೊಂಡರು.