ಸಾರಾಂಶ
ಡೆಹ್ರಾಡೂನ್: 38ನೇ ರಾಷ್ಟ್ರೀಯ ಗೇಮ್ಸ್‌ನ ಟೆನಿಸ್‌ನಲ್ಲಿ ಕರ್ನಾಟಕ ಪುರುಷರ ತಂಡ ಬೆಳ್ಳಿ ಪದಕ ಗೆದ್ದಿದೆ. ಕ್ರೀಡಾಕೂಟದ ಟೆನಿಸ್‌ನಲ್ಲಿ ರಾಜ್ಯ ಪುರುಷರ ತಂಡ ಪ್ರಾಬಲ್ಯ ಸಾಧಿಸಿದರೂ, ಚಿನ್ನ ಗೆಲ್ಲುವ ಆಸೆಗೆ ತಮಿಳುನಾಡು ತಣ್ಣೀರೆರಚಿತು.
ಶುಕ್ರವಾರ ನಡೆದ ಫೈನಲ್‌ನಲ್ಲಿ ರಾಜ್ಯ ತಂಡಕ್ಕೆ 0-2 ಸೋಲು ಎದುರಾಗಿ, ಬೆಳ್ಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.ಮೊದಲ ಸಿಂಗಲ್ಸ್‌ನಲ್ಲಿ ರಾಜ್ಯದ ರಿಶಿ ರೆಡ್ಡಿ ವಿರುದ್ಧ ತಮಿಳುನಾಡಿನ ಅಭಿನವ್ ಷಣ್ಮುಗಂ 3-6, 7-6(8-6), 6-4ರಲ್ಲಿ ಗೆಲುವು ಸಾಧಿಸಿದರು.
2ನೇ ಸಿಂಗಲ್ಸ್‌ನಲ್ಲಿ ಕರ್ನಾಟಕದ ನಂ.1 ಆಟಗಾರ ಪ್ರಜ್ವಲ್ ದೇವ್‌ಗೂ ಆಘಾತ ಎದುರಾಯಿತು. ಅವರು ತಾರಾ ಆಟಗಾರ ಮನೀಶ್ ಸುರೇಶ್‌ಕುಮಾರ್ ವಿರುದ್ಧ 7-5, 4-6, 4-6 ಸೆಟ್‌ಗಳಲ್ಲಿ ವೀರೋಚಿತ ಸೋಲು ಕಂಡರು. ಬೆಳ್ಳಿ ವಿಜೇತ ಕರ್ನಾಟಕ ತಂಡದಲ್ಲಿ ಪ್ರಜ್ವಲ್ ದೇವ್, ರಿಶಿ ರೆಡ್ಡಿ ಜೊತೆ ನಿಕಿ ಪೂನಚ್ಚ, ಆದಿಲ್ ಕಲ್ಯಾಣ್‌ಪುರ ಹಾಗೂ ಮನೀಶ್ ಜಿ. ಇದ್ದರು. ಈ ತಂಡ ಸೆಮಿಫೈನಲ್‌ನಲ್ಲಿ ತೆಲಂಗಾಣ ವಿರುದ್ಧ ಗೆದ್ದಿತ್ತು. ಮಹಿಳಾ ವಿಭಾಗದಲ್ಲಿ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಸೋತು ಹೊರಬಿದ್ದಿತ್ತು.
ಒಂದೇ ದಿನ 10 ಸ್ವರ್ಣ ಪದಕ ಗೆದ್ದ ಸರ್ವಿಸಸ್ ಈಗ ಪಟ್ಟಿಯಲ್ಲಿ ನಂ.1
ಸರ್ವಿಸಸ್ ಶುಕ್ರವಾರ ಭರ್ಜರಿ ಪದಕ ಬೇಟೆಯಾಡಿತು. ಒಂದೇ ದಿನ 10 ಚಿನ್ನ ಸೇರಿ ಒಟ್ಟು 12 ಪದಕ ಗೆದ್ದು, ಪಟ್ಟಿಯಲ್ಲಿ ಕರ್ನಾಟಕವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ. ಸದ್ಯ ಕರ್ನಾಟಕ 30 ಚಿನ್ನ, 12 ಬೆಳ್ಳಿ ಹಾಗೂ 15 ಕಂಚು ಸೇರಿ 57 ಪದಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಸರ್ವಿಸಸ್ 38 ಚಿನ್ನ, 13 ಬೆಳ್ಳಿ, 13 ಕಂಚು ಸೇರಿ 64 ಪದಕ ಜಯಿಸಿದೆ. 3ನೇ ಸ್ಥಾನದಲ್ಲಿರುವ ಮಹಾರಾಷ್ಟ್ರ 21 ಚಿನ್ನ ಸೇರಿ 99 ಪದಕಗಳನ್ನು ತನ್ನದಾಗಿಸಿಕೊಂಡಿದೆ.