ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಪರ್ವತಾರೋಹಿ, ರಾಷ್ಟ್ರೀಯ ಕ್ರೀಡಾಪಟು ಆಶಾ ಮಾಳವೀಯ. ಸ್ತ್ರೀ ಸಬಲೀಕರಣದ ಬಗ್ಗೆ ಜಾಗೃತಿಗಾಗಿ 25000 ಕಿ.ಮೀ. ಸೈಕಲ್ ಯಾತ್ರೆ ಕೈಗೊಂಡಿರುವ ಆಶಾ.
ಕನ್ನಡಪ್ರಭ ವಾರ್ತೆ ಬೆಂಗಳೂರು
ದೇಶದ ಹೆಮ್ಮೆಯ ಪರ್ವತಾರೋಹಿ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟು ಆಶಾ ಮಾಳವೀಯ ಅವರ ಸಾಧನೆಗೆ ಮತ್ತು ಇವರು ಹಮ್ಮಿಕೊಂಡಿರುವ 28 ರಾಜ್ಯಗಳ ಸೈಕಲ್ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭ ಹಾರೈಸಿದರು.ಪರ್ವತಾರೋಹಿಯಾಗಿ ಹಲವು ದಾಖಲೆಗಳನ್ನು ನಿರ್ಮಿಸಿರುವ ಮಧ್ಯಪ್ರದೇಶದ ಯುವತಿ ಆಶಾ ಅವರು ಮಂಗಳವಾರ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಸ್ತ್ರೀ ಸಬಲೀಕರಣ ಹಾಗೂ ಸ್ತ್ರೀ ಸುರಕ್ಷತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ದೇಶದ 28 ರಾಜ್ಯಗಳನ್ನು ಒಳಗೊಂಡಂತೆ ಒಟ್ಟು 25000 ಕಿ.ಮೀ ಸೈಕಲ್ ಯಾತ್ರೆ ನಡೆಸುತ್ತಾ ಅದರ ಭಾಗವಾಗಿ ಕರ್ನಾಟಕಕ್ಕೆ ಬಂದಿರುವುದನ್ನು ವಿವರಿಸಿದರು.
ತಮ್ಮ ಜಾಗೃತಿ ಅಭಿಯಾನದ ಭಾಗವಾಗಿ ಬೆಂಗಳೂರಿಗೆ ಆಗಮಿಸಿದ ಆಶಾ ಅವರನ್ನು ಸಿದ್ದರಾಮಯ್ಯ ಅವರಿಗೆ ಪರಿಚಯಿಸಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು, ಆಶಾ ಅವರ ಸಾಧನೆಯನ್ನು ವಿವರಿಸಿದರು.ಈ ಸಂದರ್ಭದಲ್ಲಿ ಸಚಿವರಾದ ಬೈರತಿ ಸುರೇಶ್ ಅವರು ಉಪಸ್ಥಿತರಿದ್ದು ಆಶಾ ಮಾಳವೀಯ ಅವರಿಗೆ ಅಭಿನಂದಿಸಿದರು.