ಸಾರಾಂಶ
ಪುಣೆ: ಭಾರತ ತಂಡ ತವರಿನಲ್ಲಿ ಸತತ 17ನೇ ಟಿ20 ಸರಣಿಯಲ್ಲಿ ಅಜೇಯವಾಗಿ ಉಳಿಯಲಿದೆ. ಇಂಗ್ಲೆಂಡ್ ವಿರುದ್ಧ ಶುಕ್ರವಾರ ಇಲ್ಲಿ ನಡೆದ 4ನೇ ಪಂದ್ಯದಲ್ಲಿ 15 ರನ್‌ಗಳ ರೋಚಕ ಗೆಲುವು ಸಾಧಿಸಿದ ಭಾರತ, 5 ಪಂದ್ಯಗಳ ಸರಣಿಯಲ್ಲಿ 3-1ರ ಮುನ್ನಡೆ ಪಡೆದು, ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ, 12 ರನ್‌ಗೆ 3 ವಿಕೆಟ್ ಕಳೆದುಕೊಂಡರೂ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ 20 ಓವರಲ್ಲಿ 9 ವಿಕೆಟ್‌ಗೆ 181 ರನ್ ಕಲೆಹಾಕಿತು. ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಇಂಗ್ಲೆಂಡ್, 19.4 ಓವರಲ್ಲಿ 166 ರನ್‌ಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಆರಂಭಿಕ ಆಘಾತ: ಸ್ಯಾಮ್ಸನ್ 1, ತಿಲಕ್ 0, ಸೂರ್ಯ 0 ರನ್‌ಗೆ ವಿಕೆಟ್ ಕಳೆದುಕೊಂಡಿದ್ದರಿಂದ ಭಾರತ ಆರಂಭಿಕ ಆಘಾತಕ್ಕೆ ಗುರಿಯಾಯಿತು. ಸರಣಿಯಲ್ಲಿ ಮೊದಲ ಪಂದ್ಯವನ್ನಾಡಿದ ಸಕೀಬ್ ಮೊಹ್ಮೂದ್ ಭಾರತದ ಪ್ರಮುಖ ಬ್ಯಾಟರ್‌ಗಳನ್ನು ಪೆವಿಲಿಯನ್‌ಗಟ್ಟಿದರು.
ಅಭಿಷೇಕ್ ಶರ್ಮಾ 29 ಹಾಗೂ ರಿಂಕು ಸಿಂಗ್ 30 ರನ್ ಗಳಿಸಿ ಭಾರತಕ್ಕೆ ಚೇತರಿಕೆ ನೀಡಿದರು. 6ನೇ ವಿಕೆಟ್‌ಗೆ ಕ್ರೀಸ್ ಹಂಚಿಕೊಂಡ ಹಾರ್ದಿಕ್ ಹಾಗೂ ಶಿವಂ ದುಬೆ, ಇಂಗ್ಲೆಂಡ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ದುಬೆ 34 ಎಸೆತದಲ್ಲಿ 7 ಬೌಂಡರಿ, 2 ಸಿಕ್ಸರ್‌ನೊಂದಿಗೆ 53 ರನ್ ಗಳಿಸಿದರೆ, ಪಾಂಡ್ಯ 30 ಎಸೆತದಲ್ಲಿ 4 ಬೌಂಡರಿ, 4 ಸಿಕ್ಸರ್‌ನೊಂದಿಗೆ 53 ರನ್ ಚಚ್ಚಿದರು.
ಇಂಗ್ಲೆಂಡ್‌ಗೆ ಫಿಲ್ ಸಾಲ್ಟ್ ಹಾಗೂ ಬೆನ್ ಡಕೆಟ್ ಉತ್ತಮ ಆರಂಭ ನೀಡಿದರು. 35 ಎಸೆತದಲ್ಲಿ 62 ರನ್ ಸೇರಿಸಿದರು. ಆದರೆ 5 ಎಸೆತಗಳ ಅಂತರದಲ್ಲಿ ಡಕೆಟ್ (39) ಹಾಗೂ ಸಾಲ್ಟ್ (23) ಇಬ್ಬರೂ ಔಟಾದರು. 26 ಎಸೆತದಲ್ಲಿ 51 ರನ್ ಚಚ್ಚಿ ಅಪಾಯಕಾರಿಯಾಗಿ ತೋರುತ್ತಿದ್ದ ಹ್ಯಾರಿ ಬ್ರೂಕ್‌ರನ್ನು ವರುಣ್ ಔಟ್ ಮಾಡಿದರು.
ಇಂಗ್ಲೆಂಡ್ ಕೊನೆ ಓವರ್ ವರೆಗೂ ಹೋರಾಟ ನಡೆಸಿದರೂ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಸ್ಕೋರ್: ಭಾರತ 20 ಓವರಲ್ಲಿ 181/9 (ಹಾರ್ದಿಕ್ 53, ದುಬೆ 53, ಸಕೀಬ್ 3-35), ಇಂಗ್ಲೆಂಡ್ 19.4 ಓವರಲ್ಲಿ 166/10 (ಬ್ರೂಕ್ 51, ಡಕೆಟ್ 39, ಬಿಷ್ಣೋಯ್ 3-28)
ದುಬೆ ಬದಲು ರಾಣಾ!
ಸ್ಫೋಟಕ ಆಟವಾಡಿ ಭಾರತಕ್ಕೆ ನೆರವಾದ ಶಿವಂ ದುಬೆ ಅವರ ತಲೆಗೆ ಪೆಟ್ಟು ಬಿದ್ದಿದ್ದರಿಂದ ಸುಪ್ತಾವಸ್ಥೆ ಬದಲಿ ಆಟಗಾರನಾಗಿ ವೇಗಿ ಹರ್ಷಿತ್ ರಾಣಾರನ್ನು ಆಡಿಸಲಾಯಿತು. ತಾವೆಸೆದ ಮೊದಲ ಓವರಲ್ಲೇ ವಿಕೆಟ್ ಕಬಳಿಸಿದ ಹರ್ಷಿತ್, ನಿರ್ಣಾಯಕ ಹಂತದಲ್ಲಿ ಜೇಮಿ ಓವರ್‌ಟನ್‌ರನ್ನು ಔಟ್ ಮಾಡಿ ಭಾರತದ ಗೆಲುವಿಗೆ ಕೊಡುಗೆ ನೀಡಿದರು.