ಭಾರತದ ತಾರಾ ಜಾವೆಲಿನ್‌ ಎಸೆತಗಾರ, ಒಲಿಂಪಿಕ್ಸ್‌ ಹಾಗೂ ಹಾಲಿ ವಿಶ್ವ ಚಾಂಪಿಯನ್‌ ನೀರಜ್‌ ಚೋಪ್ರಾ ಕರ್ನಾಟಕ ಒಲಿಂಪಿಕ್‌ ಸಂಸ್ಥೆ(ಕೆಒಎ) ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ನೀರಜ್‌ರನ್ನು ಗುರುವಾರ ಕೆಒಎ ಹಾಲ್‌ ಫೇಮ್‌ಗೆ ಸೇರ್ಪಡೆಗೊಳಿಸಲಾಯಿತು.

ಬೆಂಗಳೂರು : ಭಾರತದ ತಾರಾ ಜಾವೆಲಿನ್‌ ಎಸೆತಗಾರ, ಒಲಿಂಪಿಕ್ಸ್‌ ಹಾಗೂ ಹಾಲಿ ವಿಶ್ವ ಚಾಂಪಿಯನ್‌ ನೀರಜ್‌ ಚೋಪ್ರಾ ಕರ್ನಾಟಕ ಒಲಿಂಪಿಕ್‌ ಸಂಸ್ಥೆ(ಕೆಒಎ) ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ನೀರಜ್‌ರನ್ನು ಗುರುವಾರ ಕೆಒಎ ಹಾಲ್‌ ಫೇಮ್‌ಗೆ ಸೇರ್ಪಡೆಗೊಳಿಸಲಾಯಿತು.

ಕರ್ನಾಟಕದ ಕ್ರೀಡಾ ಸಾಧಕರನ್ನು ಗೌರವಿಸಲೆಂದೇ ಕಂಠೀರವ ಕ್ರೀಡಾಂಗಣದ ಬಳಿ ಇರುವ ಒಲಿಂಪಿಕ್ಸ್‌ ಸಂಸ್ಥೆ ಕಚೇರಿಯಲ್ಲಿ ಹಾಲ್‌ ಆಫ್‌ ಫೇಮ್‌ ಮ್ಯೂಸಿಯಂ ಇದೆ. ಇದಕ್ಕೆ ಮೊತ್ತ ಮೊದಲ ಬಾರಿ ಕರ್ನಾಟಕದ ಹೊರಗಿನ ಕ್ರೀಡಾಪಟುವಿನ ಸಾಧನೆಗಳ ವಿವರವಿರುವ ಫೋಟೋ ಸೇರಿಸಲಾಗಿದೆ. ಕೆಒಎ ಅಧ್ಯಕ್ಷ ಡಾ.ಕೆ.ಗೋವಿಂದರಾಜು ಅವರು ನೀರಜ್‌ರನ್ನು ಹಾಲ್‌ ಆಫ್‌ ಫೇಮ್‌ಗೆ ಸೇರ್ಪಡೆಗೊಳಿಸಿದರು.

ಈ ವೇಳೆ ಕೆಒಎ ಕಾರ್ಯದರ್ಶಿ ಅನಂತರಾಜು, ಕ್ರೀಡಾ ಇಲಾಖೆ ಆಯುಕ್ತ ಚೇತನ್‌, ಕಾರ್ಯದರ್ಶಿ ನವೀನ್‌ ರಾಜ್‌ ಸಿಂಗ್‌ ಉಪಸ್ಥಿತರಿದ್ದರು.

ನೀರಜ್‌ಗೆ ಸಿದ್ದರಾಮಯ್ಯ, ಕೆಒಎ ಸನ್ಮಾನ

ನೀರಜ್‌ ಚೋಪ್ರಾರನ್ನು ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲಿ ಸನ್ಮಾನಿಸಿದರು. ಈ ವೇಳೆ ನೀರಜ್‌ ಚೋಪ್ರಾ ಕ್ಲಾಸಿಕ್‌ ಕೂಟದ ವಿಶೇಷ ಜೆರ್ಸಿ ಕೂಡಾ ಬಿಡುಗಡೆ ಮಾಡಲಾಯಿತು. ಬಳಿಕ ಸಂಜೆ ನೀರಜ್‌ರನ್ನು ರಾಜ್ಯ ಒಲಿಂಪಿಕ್‌ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಜೊತೆಗೆ, ವಿಶೇಷ ಫಲಕ ಹಾಗೂ ₹5 ಲಕ್ಷ ನಗದು ಹಸ್ತಾಂತರಿಸಲಾಯಿತು.

ಕಂಠೀರವ ಕ್ರೀಡಾಂಗಣ ಅಂತಾರಾರಾಷ್ಟ್ರೀಯ ಮಾನದಂಡಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಕರ್ನಾಟಕ ಸರ್ಕಾರ, ಕೆಒಎ ಮತ್ತು ಕ್ರೀಡಾ ಇಲಾಖೆಗೆ ಧನ್ಯವಾದ. ಕ್ರೀಡಾಪಟುಗಳಿಗೆ ವಿಶ್ವ ದರ್ಜೆಯ ಸೌಲಭ್ಯ ಒದಗಿಸಲು ಮತ್ತು ಅಭಿಮಾನಿಗಳಿಗೆ ಉತ್ಕೃಷ್ಟ ಅನುಭವವನ್ನು ನೀಡಲು ಇದರಿಂದ ನಮಗೆ ಸಾಧ್ಯವಾಗಲಿದೆ. ಇದಕ್ಕಾಗಿ ಶ್ರಮಿಸಿದ ಸಿಎಂ ಸಿದ್ದರಾಮಯ್ಯ, ಡಾ.ಕೆ.ಗೋವಿಂದರಾಜು ಹಾಗೂ ಎಲ್ಲರಿಗೂ ಧನ್ಯವಾದ.

- ನೀರಜ್‌ ಚೋಪ್ರಾ