ಸಾರಾಂಶ
ಮೇ 24ರಂದು ನಿಗದಿಯಾಗಿರುವ ಎನ್‌ಸಿ ಕ್ಲ್ಯಾಸಿಕ್ ಜಾವೆಲಿನ್ ಥ್ರೋ ಕೂಟ ಪಂಚಕುಲಾದಿಂದ ಬೆಂಗಳೂರಿಗೆ ಸ್ಥಳಾಂತರ: ನೀರಜ್ ಚೋಪ್ರಾ.
ಇದೇ ಮೊದಲ ಬಾರಿಗೆ ಭಾರತದಲ್ಲಿ ವಿಶ್ವ ಶ್ರೇಷ್ಠ ಜಾವೆಲಿನ್ ಎಸೆತಗಾರರ ನಡುವೆ ಸ್ಪರ್ಧೆ.
ನವದೆಹಲಿ: ಮೇ 24ರಂದು ನಿಗದಿಯಾಗಿರುವ ಚೊಚ್ಚಲ ಆವೃತ್ತಿಯ ಎನ್‌ಸಿ ಕ್ಲ್ಯಾಸಿಕ್ (ನೀರಜ್ ಚೋಪ್ರಾ ಕ್ಲ್ಯಾಸಿಕ್) ಜಾವೆಲಿನ್ ಥ್ರೋ ಕೂಟ ಪಂಚಕುಲಾದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿದೆ ಎಂದು 2 ಬಾರಿ ಒಲಿಂಪಿಕ್ ಪದಕ ವಿಜೇತ, ಭಾರತದ ತಾರಾ ಅಥ್ಲೀಟ್ ನೀರಜ್ ಚೋಪ್ರಾ ತಿಳಿಸಿದ್ದಾರೆ.
ಸೋಮವಾರ ಆನ್‌ಲೈನ್‌ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ನೀರಜ್ ಈ ವಿಷಯ ತಿಳಿಸಿದರು. ಪಂಚಕುಲಾ ಕ್ರೀಡಾಂಗಣದಲ್ಲಿ ನೇರ ಪ್ರಸಾರಕ್ಕೆ ಅಗತ್ಯವಿರುವ ಫ್ಲಡ್‌ಲೈಟ್ಸ್ ವ್ಯವಸ್ಥೆ ಇಲ್ಲದ ಕಾರಣ, ಕೂಟವನ್ನು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಈ ಬಗ್ಗೆ ಕರ್ನಾಟಕ ಸಿಎಂ ಜೊತೆ ಮಾತನಾಡಿದ್ದೇನೆ ಎಂದರು.
ಇದೇ ಮೊದಲ ಬಾರಿಗೆ ಭಾರತದಲ್ಲಿ ವಿಶ್ವ ಶ್ರೇಷ್ಠ ಜಾವೆಲಿನ್ ಎಸೆತದಲ್ಲಿ ಸ್ಪರ್ಧಿಸಲಿದ್ದಾರೆ. ಮಾಜಿ ವಿಶ್ವ ಚಾಂಪಿಯನ್ ಗ್ರೆನಡಾದ ಆ್ಯಂಡರ್‌ಸನ್ ಪೀಟರ್ಸ್, ಒಲಿಂಪಿಕ್ ಕಂಚು ವಿಜೇತ ಜರ್ಮನಿಯ ಥಾಮಸ್ ರೊಲ್ಹರ್, ಜೀನ್ಯಾದ ಜೂಲಿಯಸ್ ಯೆಗೊ, ಅಮೆರಿಕದ ಕರ್ಟಿಸ್ ಥಾಮ್ಸನ್ ಸೇರಿ ಅನೇಕರು ಈಗಾಗಲೇ ತಮ್ಮ ಸ್ಪರ್ಧೆ ಖಚಿತಪಡಿಸಿದ್ದಾರೆ. ‘ಹಾಲಿ ಒಲಿಂಪಿಕ್ ಚಾಂಪಿಯನ್, ಪಾಕಿಸ್ತಾನದ ನದೀಂ ಅರ್ಶದ್‌ಗೂ ಆಹ್ವಾನ ನೀಡಲಾಗಿದೆ. ಭಾರತಕ್ಕೆ ಆಗಮಿಸುವ ಬಗ್ಗೆ ಅವರಿನ್ನೂ ಖಚಿತಪಡಿಸಿಲ್ಲ’ ಎಂದು ನೀರಜ್ ತಿಳಿಸಿದರು.
ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್‌ನ ಆಶ್ರಯದಲ್ಲಿ ನೀರಜ್ ಚೋಪ್ರಾ, ಜೆಎಸ್‌ಡಬ್ಲ್ಯು ಸಂಸ್ಥೆಯಿಂದ ಈ ಕೂಟವನ್ನು ಜಂಟಿಯಾಗಿ ಆಯೋಜನೆ ಮಾಡಲಾಗುತ್ತಿದೆ.