ಸಾರಾಂಶ
ಬ್ರಿಡ್ಜ್‌ಟೌನ್: ಭಾರತ ತಂಡಕ್ಕೆ ಶೀಘ್ರವೇ ಹೊಸ ಕೋಚ್ ಹಾಗೂ ಟಿ20 ನಾಯಕನ ನೇಮಕವಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
ಈ ಬಗ್ಗೆ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಕೋಚ್ ಹಾಗೂ ಆಯ್ಕೆದಾರರ ನೇಮಕ ಶೀಘ್ರವೇ ನಡೆಯಲಿದೆ. ಕ್ರಿಕೆಟ್ ಸಲಹಾ ಸಮಿತಿ ಕೋಚ್ ಹುದ್ದೆಗೆ ಸಂದರ್ಶನ ನಡೆಸಿ ಇಬ್ಬರ ಹೆಸರನ್ನು ಅಂತಿಮಗೊಳಿಸಿದೆ. ಮುಂಬೈಗೆ ತಲುಪಿದ ಬಳಿಕ ಈ ಬಗ್ಗೆ ಸಭೆ ನಡೆಸಲಿದ್ದಾರೆ. ಇಬ್ಬರಲ್ಲಿ ಒಬ್ಬರನ್ನು ಶ್ರೀಲಂಕಾ ಸರಣಿ(ಜುಲೈ 27ರಿಂದ)ಗೆ ಮುನ್ನ ಕೋಚ್ ಆಗಿ ನೇಮಕ ಮಾಡಲಿದ್ದೇವೆ’ ಎಂದಿದ್ದಾರೆ.
ಜಿಂಬಾಬ್ವೆ ಸರಣಿಗೆ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿರಲಿದ್ದಾರೆ ಎಂದು ಶಾ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ದ್ರಾವಿಡ್ ಕೌಟುಂಬಿಕ ಬದ್ಧತೆಯಿಂದಾಗಿ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದಿದ್ದಾರೆ. ಈ ವರೆಗೂ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಿದ್ದರು. ಅವರ ಅವಧಿ ಟಿ20 ವಿಶ್ವಕಪ್‌ನೊಂದಿಗೆ ಮುಕ್ತಾಯಗೊಂಡಿದೆ. ಹೊಸ್ ಕೋಚ್ ಆಗಿ ಗೌತಮ್ ಗಂಭೀರ್ ನೇಮಕಗೊಳ್ಳುವ ಸಾಧ್ಯತೆಯಿದೆ.
ಹಾರ್ದಿಕ್ ಹೊಸ ಟಿ20 ನಾಯಕ?
ಭಾರತದ ಹೊಸ ಟಿ20 ನಾಯಕತ್ವದ ಬಗ್ಗೆ ಶಾ ಮಾತನಾಡಿದ್ದು, ಆಯ್ಕೆ ಸಮಿತಿಯ ಜೊತೆ ಚರ್ಚೆ ನಡೆಸಿ ಈ ಬಗ್ಗೆ ಘೋಷಣೆ ಮಾಡಲಿದ್ದೇವೆ ಎಂದಿದ್ದಾರೆ. ಹಾರ್ದಿಕ್ ಪಾಂಡ್ಯರನ್ನು ನಾಯಕತ್ವಕ್ಕೆ ಪರಿಗಣಿಸುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾ, ‘ಹಾರ್ದಿಕ್ ಆಟದ ಬಗ್ಗೆ ಹಲವರು ಅನುಮಾನಿಸಿದ್ದರು. ಆದರೆ ನಾವು ಅವರ ಮೇಲೆ ನಂಬಿಕೆ ಇಟ್ಟು ವಿಶ್ವಕಪ್‌ಗೆ ಆಯ್ಕೆ ಮಾಡಿದ್ದೇವೆ. ಈಗ ಅವರು ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ’ ಎಂದಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಹಿರಿಯ ಆಟಗಾರರು ಆಡ್ತಾರೆ
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಡೇಜಾ ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸಿದ ಬಗ್ಗೆ ಮಾತನಾಡಿದ ಜಯ್ ಶಾ, ‘ಶ್ರೇಷ್ಠ ಆಟಗಾರರು ಸರಿಯಾದ ಸಮಯದಲ್ಲೇ ನಿವೃತ್ತಿ ಪ್ರಕಟಿಸುತ್ತಾರೆ. ನಮ್ಮ ಮುಂದಿನ ಗುರಿ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದು. ಅದರಲ್ಲಿ ಹಿರಿಯ ಆಟಗಾರರು ಆಡಲಿದ್ದಾರೆ’ ಎಂದಿದ್ದಾರೆ.ಈ ಮೂಲಕ ಹಿರಿಯ ಆಟಗಾರರು ಟಿ20 ಜೊತೆಗೆ ಏಕದಿನ ಕ್ರಿಕೆಟ್‌ನಿಂದಲೂ ದೂರವಿರುವ ಸಾಧ್ಯತೆಗಳನ್ನು ತಳ್ಳಿ ಹಾಕಿದ್ದಾರೆ. ಚಾಂಪಿಯನ್ಸ್ ಟ್ರೋಫಿ 2025ರ ಫೆಬ್ರವರಿ-ಮಾರ್ಚ್‌ನಲ್ಲಿ ಪಾಕಿಸ್ತಾನದಲ್ಲಿ ನಿಗದಿಯಾಗಿದೆ. ಅದಕ್ಕೂ ಮುನ್ನ ಭಾರತ ತಂಡ ಶ್ರೀಲಂಕಾ, ನ್ಯೂಜಿಲೆಂಡ್, ಇಂಗ್ಲೆಂಡ್ ವಿರುದ್ಧ ತಲಾ 3 ಏಕದಿನ ಪಂದ್ಯಗಳನ್ನಾಡಲಿದೆ.