ಸಾರಾಂಶ
ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭೀಕರ ಉಗ್ರ ದಾಳಿ ಬಳಿಕ ಹಲವು ಕ್ರೀಡಾ ತಾರೆಯರು ಪಾಕಿಸ್ತಾನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನವದೆಹಲಿ: ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭೀಕರ ಉಗ್ರ ದಾಳಿ ಬಳಿಕ ಹಲವು ಕ್ರೀಡಾ ತಾರೆಯರು ಪಾಕಿಸ್ತಾನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಟೀಂ ಇಂಡಿಯಾದ ಮಾಜಿ ನಾಯಕ, ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಪಾಕ್ ವಿರುದ್ಧ ಕಿಡಿಕಾರಿದ್ದು, ‘ಭಾರತವು ಪಾಕಿಸ್ತಾನದ ಜೊತೆಗಿನ ಎಲ್ಲಾ ಕ್ರಿಕೆಟ್ ಸಂಬಂಧವನ್ನು ಮುರಿಯಬೇಕು’ ಎಂದು ಒತ್ತಾಯಿದ್ದಾರೆ.
ಉಭಯ ದೇಶಗಳ ನಡುವಿನ ಕ್ರಿಕೆಟ್ ಸಂಬಂಧಗಳ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಗಂಗೂಲಿ, ‘ನೂರಕ್ಕೆ ನೂರು ಶೇಕಡಾ, ಪಾಕಿಸ್ತಾನದೊಂದಿಗಿನ ಕ್ರಿಕೆಟ್ ಸಂಬಂಧವನ್ನು ಭಾರತ ಮುರಿಯಬೇಕು. ಅದಕ್ಕೆ ಬೇಕಾದ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕು. ಪ್ರತಿ ವರ್ಷವೂ ಭಾರತದಲ್ಲಿ ಉಗ್ರರ ಅಟ್ಟಹಾಸ ನಡೆಯುತ್ತಿರುವುದು ತಮಾಷೆಯಾಗಿ ಮಾರ್ಪಟ್ಟಿದೆ. ಭಯೋತ್ಪಾದನೆಯನ್ನು ಸಹಿಸಲು ಸಾಧ್ಯವಿಲ್ಲ’ ಎಂದರು.
ಇತ್ತೀಚೆಗಷ್ಟೇ ಈ ಬಗ್ಗೆ ಮಾತನಾಡಿದ್ದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಟೀಂ ಇಂಡಿಯಾ ದ್ವಿಪಕ್ಷೀಯ ಸರಣಿಗಳಲ್ಲಿ ಪಾಕ್ ಜೊತೆಗೆ ಆಡಲ್ಲ. ಆದರೆ ಐಸಿಸಿ ಟೂರ್ನಿಗಳಲ್ಲಿ ನಿಯಮ ಪ್ರಕಾರ ಆಡಬೇಕಾಗುತ್ತದೆ’ ಎಂದಿದ್ದಾರೆ.