ಸಾರಾಂಶ
12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಆಗಸ್ಟ್ 29ಕ್ಕೆ ಆರಂಭಗೊಳ್ಳಲಿದ್ದು, ಪಂದ್ಯಗಳಿಗೆ ದೇಶದ 4 ನಗರಗಳು ಆತಿಥ್ಯ ವಹಿಸಲಿವೆ. ಆದರೆ ಬೆಂಗಳೂರಿನಲ್ಲಿ ಈ ಬಾರಿಯೂ ಪಂದ್ಯಗಳು ನಡೆಯುವುದಿಲ್ಲ.
ಮುಂಬೈ: 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಆಗಸ್ಟ್ 29ಕ್ಕೆ ಆರಂಭಗೊಳ್ಳಲಿದ್ದು, ಪಂದ್ಯಗಳಿಗೆ ದೇಶದ 4 ನಗರಗಳು ಆತಿಥ್ಯ ವಹಿಸಲಿವೆ. ಆದರೆ ಬೆಂಗಳೂರಿನಲ್ಲಿ ಈ ಬಾರಿಯೂ ಪಂದ್ಯಗಳು ನಡೆಯುವುದಿಲ್ಲ. 2023ರಲ್ಲಿ 10ನೇ ಆವೃತ್ತಿಯ ಕೆಲ ಪಂದ್ಯಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದವು. ಕಳೆದ ಬಾರಿ ಬೆಂಗಳೂರಲ್ಲಿ ಪಂದ್ಯಗಳು ಇರಲಿಲ್ಲ.
ಗುರುವಾರ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿತು. ಈ ಬಾರಿ ಮೊದಲ ಚರಣದ ಪಂದ್ಯಗಳು ವಿಶಾಖಪಟ್ಟಣಂನಲ್ಲಿ ನಡೆಯಲಿದೆ. ಅ.29ರಂದು ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಹಾಗೂ ತಮಿಳ್ ತಲೈವಾಸ್ ಮುಖಾಮುಖಿಯಾಗಲಿದ್ದು, ಅದೇ ದಿನ 2ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಪುಣೇರಿ ಪಲ್ಟನ್ ವಿರುದ್ಧ ಸೆಣಸಾಡಲಿದೆ.
ಬಳಿಕ ಸೆ.12ರಿಂದ ಟೂರ್ನಿಯ 2ನೇ ಚರಣದ ಪಂದ್ಯಗಳು ಜೈಪುರ, ಸೆ.29ರಿಂದ 3ನೇ ಚರಣದ ಪಂದ್ಯಗಳು ಚೆನ್ನೈ, ಡಿ.13ರಿಂದ 4ನೇ ಚರಣದ ಪಂದ್ಯಗಳು ನವದೆಹಲಿಯಲ್ಲಿ ನಡೆಯಲಿವೆ. ಅಕ್ಟೋಬರ್ 23ರಂದು ಲೀಗ್ ಹಂತದ ಪಂದ್ಯಗಳು ಕೊನೆಗೊಳ್ಳಲಿವೆ. ಪ್ಲೇ-ಆಫ್ ಪಂದ್ಯಗಳ ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ. ಪ್ರತಿ ದಿನ ತಲಾ 2 ಪಂದ್ಯಗಳು ನಡೆಯಲಿದ್ದು, ನವದೆಹಲಿ ಚರಣದ ಕೊನೆ 8 ದಿನ ತಲಾ 3 ಪಂದ್ಯಗಳು ನಿಗದಿಯಾಗಿವೆ.
ಯಾವಾಗ, ಎಲ್ಲಿ ಪಂದ್ಯ?
ಬೆಂಗಳೂರು ಬುಲ್ಸ್ ತಂಡದ ಡಿಫೆನ್ಸ್ ಅದ್ಭುತವಾಗಿದೆ. ತಂಡ ಯುವ ಆಟಗಾರರಿಂದ ಕೂಡಿದ್ದು, ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ತಂಡದ ಮುಖ್ಯ ಕೋಚ್ ಬಿ.ಸಿ. ರಮೇಶ್ ಹೇಳಿದ್ದಾರೆ.
ಗುರುವಾರ ಜಿಯೋಸ್ಟಾರ್ ಆಯೋಜಿಸಿದ ಮೀಡಿಯಾ ಡೇ ಆನ್‌ಲೈನ್ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದರು. ‘ಈ ಬಾರಿ ತಂಡ ಅತ್ಯುತ್ತಮವಾಗಿದೆ. ಬಹುತೇಕರು ಹೊಸಬರು. ಡಿಫೆನ್ಸ್ ಉತ್ತಮವಾಗದಿದ್ದರೆ ತಂಡ ಗೆಲ್ಲಲ್ಲ. ಹೀಗಾಗಿ ನಾವು ಈ ಬಾರಿ ಡಿಫೆನ್ಸ್ ಪಡೆಯನ್ನು ಬಲ ಪಡಿಸಿದ್ದೇವೆ. ಯುವ ರೈಡರ್‌ಗಳೂ ಇದ್ದಾರೆ. ಆಕಾಶ್ ಶಿಂಧೆ ಲೆಫ್ಟ್ ಕಾರ್ನರ್‌ನಲ್ಲಿ ಅದ್ಭುತವಾಗಿ ಆಡಬಲ್ಲರು. ಬಲಭಾಗದ ಕಾರ್ನರ್‌ನಲ್ಲಿ ಆಶಿಶ್ ಮಲ್ಲಿಕ್, ಗಣೇಶ್ ಇದ್ದಾರೆ. ಪ್ಲೇ-ಆಫ್ ನಮ್ಮ ಮೊದಲ ಗುರಿ. ಮೊದಲ ಪಂದ್ಯದಿಂದಲೇ ತಂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ’ ಎಂದರು.