ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ: ಜೋಕೋ, ಇಗಾ 3ನೇ ಸುತ್ತಿಗೆ ಲಗ್ಗೆ

| Published : May 31 2024, 02:15 AM IST / Updated: May 31 2024, 04:11 AM IST

ಸಾರಾಂಶ

ಟೆನಿಸ್‌ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ನರ ಜಯದ ಓಟಕ್ಕಿಲ್ಲ ಬ್ರೇಕ್‌. ರಬೈಕೆನಾ, ಸಬಲೆಂಕಾಗೂ ಮುನ್ನಡೆ. 3ನೇ ಸುತ್ತಿಗೆ ಪ್ರವೇಶ

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ಗಳಾದ ನೋವಾಕ್‌ ಜೋಕೋವಿಚ್‌ ಹಾಗೂ ಇಗಾ ಸ್ವಿಯಾಟೆಕ್‌ ಕ್ರಮವಾಗಿ ಪುರುಷ ಹಾಗೂ ಮಹಿಳಾ ಸಿಂಗಲ್ಸ್‌ನಲ್ಲಿ 3ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.ದಾಖಲೆಯ 24 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ, ಸರ್ಬಿಯಾದ ಜೋಕೋ ಗುರುವಾರ ನಡೆದ ಪುರುಷರ ಸಿಂಗಲ್ಸ್‌ 2ನೇ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ರಾಬರ್ಟೊ ಕ್ಯಾರ್‌ಬೆಲ್ಲಾಸ್‌ ಬೀನಾ ವಿರುದ್ಧ 6-4, 6-1, 6-1 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. 

ಟೂರ್ನಿಯ 4ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಜೋಕೋವಿಚ್‌ರ ಆಕ್ರಮಣಕಾರಿ ಆಟದ ಮುಂದೆ ನಿರುತ್ತರರಾದ ಬೀನಾ, ಸುಲಭದಲ್ಲಿ ಸೋಲನುಭವಿಸಿದರು. ಇದಕ್ಕೂ ಮುನ್ನ ಬುಧವಾರ ರಾತ್ರಿ ನಡೆದ ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನ ಹಣಾಹಣಿಯಲ್ಲಿ ವಿಶ್ವ ನಂ.1 ಇಗಾ ಸ್ವಿಯಾಟೆಕ್‌ ಅವರು ಜಪಾನ್‌ನ ನವೊಮಿ ಒಸಾಕ ವಿರುದ್ಧ 7-6(7/1), 1-6, 7-5 ಸೆಟ್‌ಗಳಲ್ಲಿ ರೋಚಕ ಗೆಲುವು ತಮ್ಮದಾಗಿಸಿಕೊಂಡರು.

 2 ಬಾರಿ ಗ್ರ್ಯಾನ್‌ಸ್ಲಾಂ ಗೆದ್ದಿರುವ ಒಸಾಕ ಪಂದ್ಯದಲ್ಲಿ ಕಠಿಣ ಪೈಪೋಟಿ ನೀಡಿದರೂ ಪೋಲೆಂಡ್‌ ಆಟಗಾರ್ತಿಯ ವಿರುದ್ಧ ಗೆಲ್ಲಲು ಸಾಧ್ಯವಾಗಲಿಲ್ಲ.ಇದೇ ವೇಳೆ ಪುರುಷರ ಸಿಂಗಲ್ಸ್‌ನ 4ನೇ ಶ್ರೇಯಾಂಕಿತ, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್‌, 5ನೇ ಶ್ರೇಯಾಂಕಿತ ಡ್ಯಾನಿಲ್‌ ಮೆಡ್ವೆಡೆವ್‌ 2ನೇ ಸುತ್ತಿನಲ್ಲಿ ಜಯಭೇರಿ ಬಾರಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ 5ನೇ ಶ್ರೇಯಾಂಕಿತೆ, ಚೆಕ್‌ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೋವಾ, 15ನೇ ಶ್ರೇಯಾಂಕಿತ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಕೂಡಾ 3ನೇ ಸುತ್ತಿಗೆ ಪ್ರವೇಶಿಸಿದರು.

ರಬೈಕೆನಾ, ಸಬಲೆಂಕಾಗೂ ಮುನ್ನಡೆ

ಟೂರ್ನಿಯಲ್ಲಿ 2ನೇ ಶ್ರೇಯಾಂಕಿತೆ ಬೆಲಾರಸ್‌ನ ಅರೈನಾ ಸಬಲೆಂಕಾ, 4ನೇ ಶ್ರೇಯಾಂಕಿತೆ ಕಜಕಸ್ತಾನದ ಎಲೈನಾ ರಬೈಕೆನಾ ಕೂಡಾ 3ನೇ ಸುತ್ತಿಗೆ ಲಗ್ಗೆ ಇಟ್ಟರು. ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನ ಪಂದ್ಯದಲ್ಲಿ ಸಬಲೆಂಕಾ, ಜಪಾನ್‌ನ ಮೊಯುಕಾ ವಿರುದ್ಧ 6-2, 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಕಳೆದ ಬಾರಿ ಸೆಮೀಸ್‌ನಲ್ಲಿ ಸೋತು ಹೊರಬಿದ್ದಿದ್ದ ಸಬಲೆಂಕಾ, 3ನೇ ಸುತ್ತಿನಲ್ಲಿ ಸ್ಪೇನ್‌ನ ಪೌಲಾ ಬರೋಸಾ ಸವಾಲು ಎದುರಾಗಲಿದೆ. ಇದೇ ವೇಳೆ 2022ರ ವಿಂಬಲ್ಡನ್‌ ಚಾಂಪಿಯನ್‌ ರಬೈಕೆನಾ, ನೆದರ್‌ಲೆಂಡ್ಸ್‌ನ ಅರಾಂಟಾ ರುಸ್‌ ಅವರನ್ನು 6-3, 6-4 ಸೆಟ್‌ಗಳಲ್ಲಿ ಸೋಲಿಸಿದರು.