ಸಾರಾಂಶ
ಭಾರತದ ಹೋರಾಟದ ಎದುರು ನ್ಯೂಜಿಲೆಂಡ್‌ನ ತಾಳ್ಮೆಗೆ ಯಶಸ್ಸು. ಭಾರತದಲ್ಲಿ 36 ವರ್ಷ ಬಳಿಕ ಟೆಸ್ಟ್ ಗೆಲ್ಲುವ ಹೊಸ್ತಿಲಲ್ಲಿ ಕಿವೀಸ್. ಕೊನೆಯ ದಿನವಾದ ನಾಳೆ ಗೆಲ್ಲಲು ಬೇಕು 107 ರನ್. ಬ್ಯಾಟಿಂಗ್‌ನಂತೆ ಬೌಲಿಂಗ್‌ನಲ್ಲೂ ಜಾದೂ ನಡೆಸಿದರೆ ಭಾರತಕ್ಕೂ ಇದೆ ಗೆಲ್ಲುವ ಅವಕಾಶ.
ಬೆಂಗಳೂರು : ಬೆಂಗಳೂರು ಟೆಸ್ಟ್ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಭಾರತದ ಹೋರಾಟದ ವಿರುದ್ಧ ನ್ಯೂಜಿಲೆಂಡ್‌ನ ತಾಳ್ಮೆಗೆ ಯಶಸ್ಸು ಸಿಕ್ಕಂತೆ ಕಾಣುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 46 ರನ್‌ಗೆ ಆಲೌಟ್ ಆದರೂ, 2ನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಹೋರಾಟ ಪ್ರದರ್ಶಿಸಿದ ಭಾರತ 462 ರನ್ ಕಲೆಹಾಕಿದ ಹೊರತಾಗಿಯೂ, ನ್ಯೂಜಿಲೆಂಡ್‌ಗೆ ಈ ಪಂದ್ಯವನ್ನು ಗೆಲ್ಲಲು ಕೇವಲ 107 ರನ್ ಗುರಿ ಸಿಕ್ಕಿದೆ.
ಭಾರತದಲ್ಲಿ ಈ ವರೆಗೂ 37 ಟೆಸ್ಟ್‌ಗಳನ್ನು ಆಡಿರುವ ನ್ಯೂಜಿಲೆಂಡ್ ಕೇವಲ 2ರಲ್ಲಿ ಗೆದ್ದಿದೆ. ಕೊನೆಯ ಬಾರಿಗೆ ಭಾರತೀಯ ನೆಲದಲ್ಲಿ ಗೆಲುವು ಕಂಡಿದ್ದು 1988ರಲ್ಲಿ. 36 ವರ್ಷಗಳ ಬಳಿಕ ಜಯಭೇರಿ ಬಾರಿಸಲು ನ್ಯೂಜಿಲೆಂಡ್ ತುದಿಗಾಲಲ್ಲಿ ನಿಂತಿದೆಯಾದರೂ, ಬ್ಯಾಟಿಂಗ್‌ನಂತೆ ಬೌಲಿಂಗ್‌ನಲ್ಲೂ ಜಾದೂ ಪ್ರದರ್ಶಿಸಿದರೆ ಭಾರತಕ್ಕೂ ಗೆಲ್ಲುವ ಅವಕಾಶವಿದೆ. ಕೊನೆಯ ದಿನವಾದ ಭಾನುವಾರ, ಪಂದ್ಯ ಯಾರ ಪಾಲಾಗಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.
3ನೇ ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿ ಇನ್ನೂ 125 ರನ್ ಹಿಂದಿದ್ದ ಭಾರತಕ್ಕೆ 4ನೇ ದಿನ ಸರ್ಫರಾಜ್ ಖಾನ್ ಹಾಗೂ ರಿಷಭ್ ಪಂತ್ ಆಸರೆಯಾದರು. ಇವರಿಬ್ಬರ ಅಬ್ಬರದ ಬ್ಯಾಟಿಂಗ್, ಭಾರತವನ್ನು 400 ರನ್ ದಾಟಿಸಿತು. ಸರ್ಫರಾಜ್ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ (150 ರನ್, 195 ಎಸೆತ, 18 ಬೌಂಡರಿ, 3 ಸಿಕ್ಸರ್) ಬಾರಿಸಿದರೆ, ಪಂತ್ 99 ರನ್ (105 ಎಸೆತ, 9 ಬೌಂಡರಿ, 5 ಸಿಕ್ಸರ್)ಗೆ ಔಟಾಗಿ ಟೆಸ್ಟ್‌ನಲ್ಲಿ 2ನೇ ಶತಕದಿಂದ ವಂಚಿತರಾದರು. ಇವರಿಬ್ಬರ ನಡುವೆ 4ನೇ ವಿಕೆಟ್‌ಗೆ ಮೂಡಿಬಂದ 177 ರನ್‌ಗಳ ಜೊತೆಯಾಟ, ಭಾರತ ಬೃಹತ್ ಮುನ್ನಡೆ ಪಡೆಯುವ ನಿರೀಕ್ಷೆ ಮೂಡಿಸಿತು.
ಮೊದಲ ಇನ್ನಿಂಗ್ಸಲ್ಲಿ ಹೊಸ ಚೆಂಡಿಗೆ ಉದುರಿದ್ದ ಭಾರತ, 2ನೇ ಇನ್ನಿಂಗ್ಸಲ್ಲಿ 2ನೇ ಹೊಸ ಚೆಂಡಿಗೆ ಬೆದರಿತು. ಕೇವಲ 54 ರನ್‌ಗೆ ಕೊನೆಯ 7 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ಕಿವೀಸ್ ವೇಗಿಗಳು ಮತ್ತೊಮ್ಮೆ ಭಾರತೀಯರನ್ನು ಕಾಡಿದರು.
ತವರಿನಂಗಳದಲ್ಲಿ ಕೆ.ಎಲ್.ರಾಹುಲ್ ಭಾರಿ ನಿರಾಸೆ ಮೂಡಿಸಿದರು. ಜಡೇಜಾ, ಅಶ್ವಿನ್ ಸಹ ತಂಡಕ್ಕೆ ಆಸರೆಯಾಗಲಿಲ್ಲ.
ದಿನದಾಟ ಕೊನೆಗೊಳ್ಳಲು ಕೆಲ ನಿಮಿಷಗಳು ಬಾಕಿ ಇದ್ದಾಗ ನ್ಯೂಜಿಲೆಂಡ್ 2ನೇ ಇನ್ನಿಂಗ್ಸ್ ಆರಂಭಿಸಿತು. ಕೇವಲ 4 ಎಸೆತಗಳ ಬಳಿಕ ಭಾರಿ ಮಳೆ ಸುರಿದ ಕಾರಣ, ದಿನದಾಟವನ್ನು ಮುಕ್ತಾಯಗೊಳಿಸಲಾಯಿತು.
ಸ್ಕೋರ್: ಭಾರತ 46 ಹಾಗೂ 462/10 (ಸರ್ಫರಾಜ್ 150, ಪಂತ್ 99, ಹೆನ್ರಿ 3-102, ರೂರ್ಕಿ 3-92), ನ್ಯೂಜಿಲೆಂಡ್ 402 ಹಾಗೂ 0/0 --07ನೇ ಬಾರಿ ರಿಷಭ್ ಪಂತ್ 99 ರನ್‌ಗೆ ಔಟಾಗುವ ಮೂಲಕ ಶತಕ ವಂಚಿತರಾದರು. 90 ರಿಂದ 99 ರನ್‌ಗಳ ನಡುವೆ ಅವರು 7 ಬಾರಿ ಔಟಾಗಿದ್ದಾರೆ. 02 ಜಯ
ಭಾರತದಲ್ಲಿ 37 ಟೆಸ್ಟ್‌ಗಳನ್ನು ಆಡಿರುವ ನ್ಯೂಜಿಲೆಂಡ್ ಈ ವರೆಗೂ ಕೇವಲ 2 ಟೆಸ್ಟ್‌ಗಳನ್ನಷ್ಟೇ ಗೆದ್ದಿದೆ.