ಸಾರಾಂಶ
ಹೈದರಾಬಾದ್: ಭಾರತದ ಸ್ಪಿನ್ ಹಾಗೂ ವೇಗದ ದಾಳಿ ಮುಂದೆ ಇತರೆಲ್ಲಾ ಬ್ಯಾಟರ್‌ಗಳು ತಿಣಕಾಡಿ, ರನ್ ಗಳಿಸಲು ಪರದಾಡಿದರೂ ಆತಿಥೇಯರನ್ನು ದಿಟ್ಟವಾಗಿ ಎದುರಿಸಿ ನಿಂತ ಓಲಿ ಪೋಪ್ ಇಂಗ್ಲೆಂಡ್ ಪಾಲಿನ ಆಪತ್ಬಾಂಧವರಾಗಿ ಮೂಡಿ ಬಂದಿದ್ದಾರೆ. ಭಾರತ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ದಿಟ್ಟ ಹೋರಾಟ ಪ್ರದರ್ಶಿಸಿದ್ದು, ಭಾರತಕ್ಕೆ ದೊಡ್ಡ ಗುರಿ ನೀಡುವ ನಿರೀಕ್ಷೆಯಲ್ಲಿದೆ.ಭಾರತ ಮೊದಲ ದಿನದ ಮೊತ್ತಕ್ಕೆ ಕೇವಲ 15 ರನ್ ಸೇರಿಸಿ, ಮೊದಲ ಇನ್ನಿಂಗ್ಸ್‌ನಲ್ಲಿ 436ಕ್ಕೆ ಆಲೌಟಾಯಿತು. 2ನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ 3ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 316 ರನ್ ಕಲೆಹಾಕಿದ್ದು, 126 ರನ್ ಮುನ್ನಡೆ ಪಡೆದಿದೆ.190 ರನ್ ಮುನ್ನಡೆ: ಇಂಗ್ಲೆಂಡ್‌ನ 246 ರನ್‌ಗೆ ಉತ್ತರವಾಗಿ 2ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 421 ರನ್ ಗಳಿಸಿದ್ದ ಭಾರತ ಶನಿವಾರ ಯಾವುದೇ ಮ್ಯಾಜಿಕ್ ನಡೆಸಲಿಲ್ಲ. ಕ್ರೀಸ್ ಕಾಯ್ದುಕೊಂಡಿದ್ದ ಜಡೇಜಾ 87 ರನ್ ಗಳಿಸಿದ್ದಾಗ ಜೋ ರೂಟ್ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದು ನಿರ್ಗಮಿಸಿದರು. ಅಕ್ಷರ್ ಇನ್ನಿಂಗ್ಸ್ 44ಕ್ಕೆ ಕೊನೆಗೊಂಡಿತು. ರೂಟ್ 4 ವಿಕೆಟ್ ಕಿತ್ತರು.ಅಬ್ಬರದ ಆರಂಭ: 2ನೇ ಇನ್ನಿಂಗ್ಸ್‌ನಲ್ಲಿ ಕ್ರೀಸ್‌ಗಳಿದ ಇಂಗ್ಲೆಂಡ್ ಬ್ಯಾಟರ್‌ಗಳು ‘ಬಾಜ್‌ಬಾಲ್’ ಶೈಲಿಯಲ್ಲಿ ಅಬ್ಬರದ ಆಟವಾಡಿದರು. ಆದರೆ 33 ಎಸೆತದಲ್ಲಿ 31 ರನ್ ಗಳಿಸಿದ್ದ ಕ್ರಾವ್ಲಿ ವಿಕೆಟನ್ನು ಅಶ್ವಿನ್ ಪಡೆಯುವುದರೊಂದಿಗೆ ಇಂಗ್ಲೆಂಡ್ ಕುಸಿಯಲಾರಂಭಿಸಿತು. ಡಕೆಟ್(47) ಅರ್ಧಶತಕದ ಅಂಚಿನಲ್ಲಿ ಎಡವಿದರು. ಬಳಿಕ ಜೋ ರೂಟ್(02), ಬೇರ್‌ಸ್ಟೋವ್(10), ನಾಯಕ ಬೆನ್ ಸ್ಟೋಕ್ಸ್(06) ಬಂದಷ್ಟೇ ವೇಗದಲ್ಲಿ ಪೆವಿಲಿಯನ್‌ಗೆ ಮರಳಿದರು. 163ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್‌ಗೆ ಓಲಿ ಪೋಪ್-ಬೆನ್ ಫೋಕ್ಸ್(34) ಜೋಡಿ ಆಸರೆಯಾಯಿತು. 6ನೇ ವಿಕೆಟ್‌ಗೆ ಇವರಿಬ್ಬರು 112 ರನ್ ಜೊತೆಯಾಟವಾಡಿದರು. ಅಶ್ವಿನ್, ಜಡೇಜಾ, ಅಕ್ಷರ್ ಜೊತೆಗೆ ಬೂಮ್ರಾರ ಮೊನಚು ಎಸೆತಗಳನ್ನು ಸಮರ್ಥವಾಗಿ ಎದುರಿಸಿದ ಪೋಪ್, 208 ಎಸೆತಗಳಲ್ಲಿ 17 ಬೌಂಡರಿಗಳೊಂದಿಗೆ ಔಟಾಗದೆ 148 ರನ್ ಸಿಡಿಸಿದ್ದಾರೆ. 4ನೇ ದಿನ ಮತ್ತಷ್ಟು ರನ್ ಸೇರಿಸಿ, ಭಾರತಕ್ಕೆ ದೊಡ್ಡ ಗುರಿ ನೀಡುವ ನಿರೀಕ್ಷೆಯಲ್ಲಿದ್ದಾರೆ. ಬೂಮ್ರಾ, ಅಶ್ವಿನ್ ತಲಾ 2, ಜಡೇಜಾ, ಅಕ್ಷರ್ ತಲಾ 1 ವಿಕೆಟ್ ಪಡೆದರು.ಸ್ಕೋರ್: ಇಂಗ್ಲೆಂಡ್ 246/10 ಮತ್ತು 316/6(3ನೇ ದಿನದಂತ್ಯಕ್ಕೆ)(ಪೋಪ್ 148, ಫೋಕ್ಸ್ 34, ಬೂಮ್ರಾ 2-29, ಅಶ್ವಿನ್ 2-93), ಭಾರತ 436/10(ಜಡೇಜಾ 87, ಅಕ್ಷರ್ 44, ರೂಟ್ 4-79)-12ನೇ ಬಾರಿ
ಅಶ್ವಿನ್ ಟೆಸ್ಟ್‌ನಲ್ಲಿ ಬೆನ್ ಸ್ಟೋಕ್ಸ್‌ರನ್ನು 12ನೇ ಬಾರಿ ಔಟ್ ಮಾಡಿದರು. ಇದು ಯಾವುದೇ ಬ್ಯಾಟರ್ ಪೈಕಿ ಗರಿಷ್ಠ. ವಾರ್ನರ್‌ರನ್ನು ಅಶ್ವಿನ್ 11 ಬಾರಿ ಔಟ್ ಮಾಡಿದ್ದರು.