ಸಾರಾಂಶ
ಬೆಂಗಳೂರು: ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ತಾವು ಇನ್ನು ಬಹಳ ವರ್ಷ ವೃತ್ತಿಪರ ಕ್ರಿಕೆಟಿಗನಾಗಿ ಮುಂದುವರಿಯಲು ಸಾಧ್ಯವಿಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದ್ದು, ನಿವೃತ್ತಿ ಬಳಿಕ ಕೆಲ ಕಾಲ ಕಣ್ಮರೆಯಾಗುವುದಾಗಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ಸಾಮಾಜಿಕ ತಾಣಗಳಲ್ಲಿ ಆರ್‌ಸಿಬಿ ತನ್ನ ಅಧಿಕೃತ ಖಾತೆಗಳ ಮೂಲಕ ಹಾಕಿರುವ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಈ ರೀತಿ ಹೇಳಿದ್ದಾರೆ. ‘ಯಾವುದೇ ಕೆಲಸಗಳನ್ನು ಪೂರ್ತಿಗೊಳಿಸದೆ ಬಳಿಕ ಜೀವನದಲ್ಲಿ ಪಶ್ಚಾತ್ತಾಪ ಪಡುವಂತೆ ಆಗಬಾರದು.
ಆ ರೀತಿ ನಾನು ಯಾವತ್ತೂ ಮಾಡುವುದಿಲ್ಲ. ಒಮ್ಮೆ ನನ್ನ ಕೆಲಸ ಮುಗಿದ ಬಳಿಕ ಕೆಲ ಸಮಯ ಕಣ್ಮರೆಯಾಗಲಿದ್ದೇನೆ. ಯಾರಿಗೂ ಸಿಗುವುದಿಲ್ಲ’ ಎಂದು ಕೊಹ್ಲಿ ಹೇಳಿದ್ದಾರೆ. ಇದೇ ವೇಳೆ ತಾವು ಆಡುವ ವರೆಗೂ ತಂಡಕ್ಕಾಗಿ ಶೇ.100ರಷ್ಟು ಪರಿಶ್ರಮ ವಹಿಸುವುದಾಗಿಯೂ ಕೊಹ್ಲಿ ಹೇಳಿಕೊಂಡಿದ್ದಾರೆ.
2022ರ ಟಿ20 ವಿಶ್ವಕಪ್ ಬಳಿಕ ಕೊಹ್ಲಿ ಟಿ20 ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆಯುವ ಬಗ್ಗೆ ಸುದ್ದಿಗಳು ಹರಿದಾಡಿತ್ತು. ಆದರೆ ಅವರು 2024 ಟಿ20 ವಿಶ್ವಕಪ್‌ನಲ್ಲೂ ಆಡಲು ಸಜ್ಜಾಗಿದ್ದಾರೆ. ಇನ್ನಷ್ಟು ವರ್ಷಗಳ ಕಾಲ ಆಡುವ ಸಾಮರ್ಥ್ಯವಿದ್ದರೂ, ಅವರು ಯಾವುದೇ ಕ್ಷಣದಲ್ಲಿ ನಿವೃತ್ತಿ ಘೋಷಿಸಬಹುದು ಎಂಬುದು ಸದ್ಯದ ವಿಶ್ಲೇಷಣೆ. ಕೊಹ್ಲಿ ಸದ್ಯ 2024ರ ಐಪಿಎಲ್‌ನಲ್ಲಿ ಕೊಹ್ಲಿ 13 ಪಂದ್ಯಗಳಲ್ಲಿ 66.10 ಸರಾಸರಿ, 155.16 ಸ್ಟ್ರೈಕ್‌ರೇಟ್‌ನೊಂದಿಗೆ 661 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 5 ಅರ್ಧ ಶತಕಗಳೂ ಸೇರಿವೆ. ಅವರು ಆರೆಂಜ್ ಕ್ಯಾಪ್ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದಾರೆ.