ಪಾಕ್‌ಗಿಂದು ಡಚ್ ಚಾಲೆಂಜ್!
KannadaprabhaNewsNetwork | Published : Oct 06 2023, 01:15 AM IST / Updated: Oct 07 2023, 12:30 PM IST
ಪಾಕ್‌ಗಿಂದು ಡಚ್ ಚಾಲೆಂಜ್!
ಸಾರಾಂಶ
ಪಾಕಿಸ್ತಾನಕ್ಕೆ ಈಗ ಬೌಲಿಂಗ್‌ದ್ದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ
ಹೈದರಾಬಾದ್: ಮೂರು ತಿಂಗಳ ಹಿಂದೆ ತನ್ನ ಮೂವರು ವೇಗಿಗಳು ಪ್ರಚಂಡ ಲಯದಲ್ಲಿದ್ದಾಗ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದ್ದ ಪಾಕಿಸ್ತಾನಕ್ಕೆ ಈಗ ಬೌಲಿಂಗ್‌ದ್ದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಶುಕ್ರವಾರ ನೆದರ್‌ಲೆಂಡ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿರುವ ಪಾಕಿಸ್ತಾನ, ದೊಡ್ಡ ಗೆಲುವಿನೊಂದಿಗೆ ಟೂರ್ನಿಯ ಆರಂಭದಲ್ಲೇ ಉತ್ತಮ ನೆಟ್ ರನ್‌ರೇಟ್ ಸಂಪಾದಿಸಲು ಎದುರು ನೋಡುತ್ತಿದೆ. ಏಷ್ಯಾಕಪ್‌ನಲ್ಲಿ ಗಾಯಗೊಂಡ ವೇಗಿ ನಸೀಂ ಶಾ ವಿಶ್ವಕಪ್‌ನಿಂದಲೇ ಹೊರಬಿದ್ದಿದ್ದು ತಂಡಕ್ಕೆ ಹಿನ್ನಡೆ ಉಂಟು ಮಾಡಿದ್ದು, ಇನ್ನಿಬ್ಬರು ತಾರಾ ವೇಗಿಗಳಾದ ಶಾಹೀನ್ ಅಫ್ರಿದಿ ಹಾಗೂ ಹ್ಯಾರಿಸ್ ರೌಫ್ ಕೂಡ ಸಂಪೂರ್ಣ ಫಿಟ್ ಇಲ್ಲ. ಏಷ್ಯಾಕಪ್‌ನ ಸೂಪರ್-4ನಲ್ಲಿ ಕೊನೆಯ ಸ್ಥಾನ ಪಡೆದಿದ್ದ ಪಾಕ್, ಅಭ್ಯಾಸ ಪಂದ್ಯಗಳಲ್ಲಿ ಹೀನಾಯ ಬೌಲಿಂಗ್ ಪ್ರದರ್ಶನ ನೀಡಿತ್ತು. ನ್ಯೂಜಿಲೆಂಡ್ ವಿರುದ್ಧ ಮೊದಲ ಅಭ್ಯಾಸ ಪಂದ್ಯದಲ್ಲಿ 345 ರನ್ ಗಳಿಸಿದ ಹೊರತಾಗಿಯೂ 6 ಓವರ್ ಬಾಕಿ ಇರುವಂತೆ ಸೋಲುಂಡಿತ್ತು. 2ನೇ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ 351 ರನ್ ಬಿಟ್ಟುಕೊಟ್ಟಿತ್ತು. ಪ್ರಮುಖವಾಗಿ ಕೊನೆಯ 20 ಓವರ್‌ಗಳಲ್ಲಿ ಪಾಕಿಸ್ತಾನಿ ಬೌಲರ್‌ಗಳು ಭಾರಿ ದುಬಾರಿಯಾಗುತ್ತಿದ್ದು, ಟೂರ್ನಿ ಸಾಗಿದಂತೆ ಬೌಲಿಂಗ್ ಸಮಸ್ಯೆಯೇ ಪಾಕಿಸ್ತಾನಕ್ಕೆ ಮಾರಕವಾಗಬಹುದು. ಇದರ ಜೊತೆಗೆ ಉಪನಾಯಕ ಶದಾಬ್ ಖಾನ್ ಲಯಕ್ಕೆ ಮರಳಲು ಪರದಾಡುತ್ತಿದ್ದಾರೆ. ಬಾಬರ್ ಆಜಂ ಹಾಗೂ ಮೊಹಮದ್ ರಿಜ್ವಾನ್ ಉತ್ತಮ ಫಾರ್ಮ್‌ನಲ್ಲಿದ್ದು, ಇಫ್ತಿಕಾರ್ ಅಹ್ಮದ್ ಮೇಲೆ ತಂಡ ತಕ್ಕಮಟ್ಟಿಗೆ ನಿರೀಕ್ಷೆ ಇಟ್ಟುಕೊಳ್ಳಬಹುದು. ಮತ್ತೊಂದೆಡೆ ನೆದರ್‌ಲೆಂಡ್ಸ್ ಒಂದು ತಿಂಗಳ ಮೊದಲೇ ಭಾರತಕ್ಕೆ ಬಂದಿಳಿದರೂ, ತಂಡ ಇನ್ನಷ್ಟೇ ಯಶಸ್ಸು ಕಾಣಬೇಕಿದೆ. ಶಿಬಿರದ ವೇಳೆ ಕರ್ನಾಟಕಕ್ಕೆ ಶರಣಾಗಿದ್ದ ಡಚ್ ಪಡೆಯ ವಿಶ್ವಕಪ್ ಅಭ್ಯಾಸ ಪಂದ್ಯಗಳು ಮಳೆಗೆ ಬಲಿಯಾಗಿದ್ದವು. ತಂಡದಲ್ಲಿ ಕೆಲ ಹಿರಿಯ ಹಾಗೂ ಅನುಭವಿ ಆಟಗಾರರಿದ್ದು, ಪಾಕ್‌ಗೆ ಸೋಲುಣಿಸಿದರೆ ವಿಶ್ವಕಪ್‌ನ ಆರಂಭದಲ್ಲೇ ಅತಿ ರೋಚಕ ಫಲಿತಾಂಶವೊಂದಕ್ಕೆ ಸಾಕ್ಷಿಯಾದ ಹಿರಿಮೆ ನೆದರ್‌ಲೆಂಡ್ಸ್‌ಗೆ ಒಲಿಯಲಿದೆ. ಒಟ್ಟು ಮುಖಾಮುಖಿ: 06 ಪಾಕಿಸ್ತಾನ: 06 ನೆದರ್‌ಲೆಂಡ್ಸ್: 00 ಸಂಭವನೀಯ ಆಟಗಾರರ ಪಟ್ಟಿ ಪಾಕಿಸ್ತಾನ: ಫಖರ್, ಇಮಾಮ್, ಬಾಬರ್(ನಾಯಕ), ರಿಜ್ವಾನ್, ಶಕೀಲ್/ಸಲ್ಮಾನ್, ಇಫ್ತಿಕಾರ್, ಶದಾಬ್, ನವಾಜ್, ಹಸನ್, ಶಾಹೀನ್, ಹ್ಯಾರಿಸ್. ನೆದರ್‌ಲೆಂಡ್ಸ್: ವಿಕ್ರಂಜಿತ್, ಓ ಡೌಡ್, ಬಾರ್ರೆಸ್ಸಿ, ಡಿ ಲೀಡೆ, ಆ್ಯಕರ್‌ಮನ್, ಎಡ್ವರ್ಡ್ಸ್(ನಾಯಕ), ಕ್ಲೇನ್, ವಾನ್ ಬೀಕ್, ಮರ್ವೆ, ಶಾರಿಜ್, ಮೀಕೆರೆನ್. ಪಂದ್ಯ: ಮಧ್ಯಾಹ್ನ 2ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್