ಸಾರಾಂಶ
ಲಾಹೋರ್: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ಗೊಂದಲ ಸದ್ಯಕ್ಕೆ ಮುಗಿಯುವ ಲಕ್ಷಣ ಕಂಡುಬರುತ್ತಿಲ್ಲ. ಭಾರತದ ಪಂದ್ಯಗಳ ಆಯೋಜನೆ ವಿಚಾರದಲ್ಲಿ ಬಿಸಿಸಿಐ ಜೊತೆ ತಿಕ್ಕಾಟಕ್ಕಿಳಿದಿದ್ದ ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ), ಸದ್ಯ ತನ್ನ ಕ್ರೀಡಾಂಗಣಗಳನ್ನು ಟೂರ್ನಿಗೂ ಮುನ್ನ ಸಿದ್ಧಗೊಳಿಸಲು ಹೆಣಗಾಡುತ್ತಿದೆ.
ಟೂರ್ನಿಯ ಪಂದ್ಯಗಳು ನಿಗದಿಯಾಗಿರುವ ಪಾಕ್‌ನ 3 ಕ್ರೀಡಾಂಗಣಗಳ ನವೀಕರಣ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಹೀಗಾಗಿ ಫೆ.19ರಿಂದ ಆಂಭಗೊಳ್ಳಬೇಕಿರುವ ಟೂರ್ನಿಯನ್ನು ಪಾಕ್‌ನಿಂದಲೇ ಸ್ಥಳಾಂತರಗೊಳಿಸಲು ಐಸಿಸಿ ಮುಂದಾಗಿದೆ ಎಂದು ವರದಿಯಾಗಿದೆ. ಪಾಕ್‌ನ ಲಾಹೋರ್, ಕರಾಚಿ ಹಾಗೂ ರಾವಲ್ಪಿಂಡಿ ಕ್ರೀಡಾಂಗಣಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ನಿಗದಿಯಾಗಿವೆ.
ಇದಕ್ಕಾಗಿ ಪಿಸಿಬಿ ಕಳೆದ ವರ್ಷ ಈ ಮೂರೂ ಕ್ರೀಡಾಂಗಣಗಳ ನವೀಕರಣ ಕಾರ್ಯ ಕೈಗೆತ್ತಿಕೊಂಡಿತ್ತು. 2024ರ ಡಿಸಂಬರ್ ಅಂತ್ಯಕ್ಕೆ ಕಾಮಗಾರಿ ಮುಗಿಯಬೇಕಿತ್ತು. ಆದರೆ ಕರಾಚಿ ಹಾಗೂ ಲಾಹೋರ್ ಕ್ರೀಡಾಂಗಣದ ಕಾಮಗಾರಿ ಇನ್ನೂ ಅರ್ಧದಷ್ಟಯ ಬಾಕಿಯಿದೆ. ಸೀಟು, ಫ್ಲಡ್‌ಲೈಟ್ಸ್, ಓಟ್‌ಫೀಲ್ಡ್ ಕೆಲಸ ಇನ್ನೂ ಮುಗಿದಿಲ್ಲ. ಕ್ರೀಡಾಂಗಣ ಕಟ್ಟಡದ ಕಾಮಗಾರಿ ಚಾಲ್ತಿಯಲ್ಲಿರುವ ಫೋಟೋಗಳು ವೈರಲ್ ಆಗಿವೆ.
ಜ.25ರ ಗಡುವು: ಕಾಮಗಾರಿ ಪೂರ್ಣಗೊಳಿಸಲು ಐಸಿಸಿ ಜ.25ರ ಗಡುವು ವಿಧಿಸಿದೆ. ಆದರೆ ಈ ಅವಧಿಯಲ್ಲಿ ಕಾಮಗಾರಿ ಮುಗಿಯುವ ಸಾಧ್ಯತೆ ಕಡಿಮೆ. ಕೆಲ ವರದಿಗಳ ಪ್ರಕಾರ, ಫೆಬ್ರವರಿಯಲ್ಲೂ ಕಾಮಗಾರಿ ಮುಗಿಯುವ ಲಕ್ಷಣವಿಲ್ಲ. ಅರ್ಧಂಬರ್ಧ ಸಿದ್ಧಗೊಂಡ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲು ಐಸಿಸಿ ತಯಾರಿಲ್ಲ. ಹೀಗಾಗಿ ಐಸಿಸಿ ಅಧಿಕಾರಿಗಳು ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ತಿಂಗಳ ಅಂತ್ಯಕ್ಕೆ ಕ್ರೀಡಾಂಗಣಗಳು ಸಿದ್ಧಗೊಳ್ಳದಿದ್ದರೆ ಇಡೀ ಟೂರ್ನಿಯನ್ನೇ ಬೇರೆ ದೇಶಕ್ಕೆ ಸ್ಥಳಾಂತರಗೊಳಿಸಲು ಐಸಿಸಿ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.ಈ ನಡುವೆ ಪಿಸಿಬಿ ಕಾಮಗಾರಿ ಬಗ್ಗೆ ಮಾಹಿತಿ ಒದಗಿಸಿದ್ದು, ಐಸಿಸಿ ವಿಧಿಸಿರುವ ಗಡುವು ಮುಗಿಯುವ ಮುನ್ನ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದೆ.ಈ ಬಾರಿ ಚಾಂಪಿಯನ್ಸ್ ಟ್ರೋಫಿ ಫೆ.19ರಿಂದ ಮಾ.9ರ ವರೆಗೆ ನಡೆಯಲಿದೆ. ಬಹುತೇಕ ಪಂದ್ಯಗಳು ಪಾಕ್‌ನಲ್ಲಿ ನಿಗದಿಯಾಗಿದ್ದು, ಭಾರತದ ಪಂದ್ಯಗಳಿಗೆ ದುಬೈ ಆತಿಥ್ಯ ವಹಿಸಲಿದೆ. 8 ತಂಡಗಳು ಪಾಲ್ಗೊಳ್ಳಲಿವೆ.
3 ದಶಕ ಬಳಿಕ ಪಾಕ್‌ಗೆ ಸಿಕ್ಕಿದೆ ಆತಿಥ್ಯ ಭಾಗ್ಯ!
ಪಾಕಿಸ್ತಾನಕ್ಕೆ ಸುಮಾರು 3 ದಶಕಗಳ ಬಳಿಕ ಐಸಿಸಿ ಟೂರ್ನಿಯ ಆತಿಥ್ಯ ಭಾಗ್ಯ ಲಭಿಸಿದೆ. ಆದರೆ ಇದನ್ನು ಬಳಸಿಕೊಳ್ಳಲಿದೆಯೋ ಎಂಬ ಕುತೂಹಲವಿದೆ. 1996ರಲ್ಲಿ ಭಾರತ, ಶ್ರೀಲಂಕಾ ಹಾಗೂ ಪಾಕ್ ಜಂಟಿಯಾಗಿ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸಿದ್ದವು. ಆ ಬಳಿಕ ಪಾಕ್‌ಗೆ ಯಾವುದೇ ಐಸಿಸಿ ಟೂರ್ನಿಗೂ ಆತಿಥ್ಯ ವಹಿಸುವ ಅವಕಾಶ ಲಭಿಸಿಲ್ಲ.
ತ್ರಿಕೋನ ಸರಣಿಯನ್ನು ಲಾಹೋರ್, ಕರಾಚಿಗೆ ಸ್ಥಳಾಂತರಿಸಿದ ಪಿಸಿಬಿ
ಕಾಮಗಾರಿ ವಿಳಂಬ ಸುದ್ದಿ ನಡುವೆಯೇ ಪಿಸಿಬಿಯು ಪಾಕಿಸ್ತಾನ, ದ.ಆಫ್ರಿಕಾ, ನ್ಯೂಜಿಲೆಂಡ್ ನಡುವೆ ಫೆ.8ರಿಂದ 14ರ ವರೆಗೆ ನಡೆಯಬೇಕಿರುವ ತ್ರಿಕೋನ ಸರಣಿಯನ್ನು ಮುಲ್ತಾನ್‌ನಿಂದ ಕರಾಚಿ ಹಾಗೂ ಲಾಹೋರ್‌ಗೆ ಸ್ಥಳಾಂತರಿಸಿದೆ. ಈ ಮೂಲಕ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬ ಸಂದೇಶ ರವಾನಿಸಿದೆ.