ಸಾರಾಂಶ
ದುಬೈ: 2025ರ ಚಾಂಪಿಯನ್ಸ್ ಟ್ರೋಫಿಯನ್ನು ಸ್ಥಳಾಂತರಿಸಿದರೆ 2026ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಬಹಿಷ್ಕಾರ ಹಾಕುವುದಾಗಿ ಐಸಿಸಿಗೆ ಪಾಕಿಸ್ತಾನ ಎಚ್ಚರಿಕೆ ನೀಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಮುಂದಿನ ವರ್ಷದ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ಪಾಕ್ ಬಳಿ ಇದ್ದು, ಫೆಬ್ರವರಿ-ಮಾರ್ಚ್‌ನಲ್ಲಿ ಟೂರ್ನಿ ನಿಗದಿಯಾಗಿದೆ. ಆದರೆ ಭಾರತ ತಂಡವನ್ನು ಬಿಸಿಸಿಐ ಪಾಕಿಸ್ತಾನಕ್ಕೆ ಕಳುಹಿಸುವ ಸಾಧ್ಯತೆಯಿಲ್ಲ. ಬದಲಾಗಿ ಟೂರ್ನಿಯನ್ನು ಬೇರೆಡೆ ನಡೆಸಲು ಐಸಿಸಿಗೆ ಬಿಸಿಸಿಐ ಒತ್ತಾಯಿಸಿದೆ ಎಂದು ತಿಳಿದುಬಂದಿದೆ.
ಈ ನಡುವೆ ಭಾರತ ತಂಡ ಪಾಕ್‌ಗೆ ಆಗಮಿಸದಿದ್ದರೆ ಅಥವಾ ಟೂರ್ನಿಯನ್ನು ಐಸಿಸಿ ಬೇರೆಡೆಗೆ ಸ್ಥಳಾಂತರಿಸಿದರೆ, 2026ರ ಟಿ20 ವಿಶ್ವಕಪ್ ಆಡಲು ಭಾರತಕ್ಕೆ ಹೋಗದೆ ಬಹಿಷ್ಕಾರ ಹಾಕುವುದಾಗಿ ಐಸಿಸಿಗೆ ಪಾಕಿಸ್ತಾನ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ. ಭಾರತ ತಂಡ 2008ರಲ್ಲಿ ಕೊನೆ ಬಾರಿ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಿತ್ತು.
ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ: ಯುಎಇ ಸಹ ಆತಿಥ್ಯ?
ಚಾಂಪಿಯನ್ಸ್ ಟ್ರೋಫಿಯನ್ನು ಕಳೆದ ವರ್ಷದ ಏಷ್ಯಾಕಪ್ ರೀತಿ ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಐಸಿಸಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಟೂರ್ನಿಯ ಆತಿಥ್ಯ ಹಕ್ಕು ಪಾಕಿಸ್ತಾನದ ಬಳಿಯೇ ಉಳಿಯಲಿದ್ದು, ಯುಎಇ ಸಹ ಕೆಲ ಪಂದ್ಯಗಳಿಗೆ ಆತಿಥ್ಯ ನೀಡಲಿದೆ ಎನ್ನಲಾಗುತ್ತಿದೆ. ಭಾರತದ ಲೀಗ್ ಹಂತದ ಪಂದ್ಯಗಳು, ಒಂದು ವೇಳೆ ಭಾರತ ಸೆಮಿಫೈನಲ್, ಫೈನಲ್ ಪ್ರವೇಶಿಸಿದರೆ ಆ ಪಂದ್ಯಗಳನ್ನು ದುಬೈನಲ್ಲಿ ನಡೆಸಲು ಐಸಿಸಿ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.