ವಿಂಬಲ್ಡನ್‌ ಫೈನಲ್‌ಗೆ ಲಗ್ಗೆಯಿಟ್ಟ ಪೌಲಿನಿ!

| Published : Jul 12 2024, 01:32 AM IST / Updated: Jul 12 2024, 04:56 AM IST

ಸಾರಾಂಶ

ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ಫೈನಲ್‌ಗೆ ಲಗ್ಗೆಯಿಟ್ಟ ಇಟಲಿಯ ಜ್ಯಾಸ್ಮಿನ್‌ ಪೌಲಿನಿ. ಸೆಮಿಫೈನಲ್‌ನಲ್ಲಿ ಡೊನಾ ವೆಕಿಚ್‌ ವಿರುದ್ಧ ಗೆಲುವು. ಫೈನಲ್‌ಗೇರಿದ ಇಟಲಿಯ ಮೊದಲ ಮಹಿಳಾ ಆಟಗಾರ್ತಿ. ಇಂದು ಪುರುಷರ ಸಿಂಗಲ್ಸ್‌ ಸೆಮಿಫೈನಲ್‌.

ಲಂಡನ್‌: ವಿಂಬಲ್ಡನ್‌ ಫೈನಲ್‌ ಪ್ರವೇಶಿಸುವ ಮೂಲಕ ಜ್ಯಾಸ್ಮಿನ್‌ ಪೌಲಿನಿ, 2016ರ ಬಳಿಕ ಸತತ 2 ಗ್ರ್ಯಾನ್‌ ಸ್ಲಾಂ ಟೂರ್ನಿಗಳ ಫೈನಲ್‌ಗೇರಿದ ಮೊದಲ ಮಹಿಳಾ ಟೆನಿಸ್‌ ಆಟಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಪೌಲಿನಿ, ಕ್ರೊವೇಷಿಯಾದ ಡೊನ್ನಾ ವೆಕಿಚ್ ವಿರುದ್ಧ 2-6, 6-4, 7-6 (10/8) ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿ, ವಿಂಬಲ್ಡನ್‌ ಫೈನಲ್‌ ಪ್ರವೇಶಿಸಿದ ಇಟಲಿಯ ಮೊದಲ ಮಹಿಳೆ ಎನ್ನುವ ದಾಖಲೆ ಬರೆದರು.

ಈ ವರ್ಷ ಫ್ರೆಂಚ್‌ ಓಪನ್‌ ಫೈನಲ್‌ನಲ್ಲೂ ಆಡಿದ್ದ ಪೌಲಿನಿ, ಇದೀಗ ಚೊಚ್ಚಲ ಗ್ರ್ಯಾನ್‌ ಸ್ಲಾಂ ಗೆಲುವಿನಿಂದ ಕೇವಲ ಒಂದು ಹೆಜ್ಜೆ ದೂರವಿದ್ದಾರೆ. 2 ಗಂಟೆ 51 ನಿಮಿಷಗಳ ಕಾಲ ನಡೆದ, ಭಾರೀ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಪೌಲಿನಿ ಮೊದಲ ಸೆಟ್‌ ಅನ್ನು ಸುಲಭವಾಗಿ ಕೈಚೆಲ್ಲಿದರು. ಆದರೆ ಇಟಲಿ ಆಟಗಾರ್ತಿ ಹೋರಾಟ ಬಿಡಲಿಲ್ಲ.

2ನೇ ಸೆಟ್‌ನಲ್ಲಿ 4-4ರಲ್ಲಿ ಸಮಬಲ ಸಾಧಿಸಿದಾಗ ವೆಕಿಚ್‌ಗೆ ಗೆಲುವು ಸಾಧಿಸುವ ಉತ್ತಮ ಅವಕಾಶವಿತ್ತು. ಆದರೆ ಸತತ 2 ಗೇಮ್‌ ತಮ್ಮದಾಗಿಸಿಕೊಂಡ ಪೌಲಿನಿ, ಪಂದ್ಯವನ್ನು 3ನೇ ಸೆಟ್‌ಗೆ ಕೊಂಡೊಯ್ದರು.

3ನೇ ಸೆಟ್‌ನಲ್ಲಿ ಮೊದಲು 1-3, ಬಳಿಕ 3-4ರಲ್ಲಿ ಹಿಂದಿದ್ದ ಪೌಲಿನಿ, ಛಲ ಬಿಡಲಿಲ್ಲ. 6-6 ಗೇಮ್‌ಗಳಲ್ಲಿ ಸಮಬಲ ಸಾಧಿಸಿ, ಫಲಿತಾಂಶಕ್ಕಾಗಿ ಟೈ ಬ್ರೇಕರ್‌ ನಡೆಸುವಂತೆ ಮಾಡಿದರು.

ಟೈ ಬ್ರೇಕರ್‌ನಲ್ಲೂ ಉಭಯ ಆಟಗಾರ್ತಿಯರ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟಿತು. ಕೊನೆಯ 10-8ರಲ್ಲಿ ಟೈ ಬ್ರೇಕರ್‌ ಗೆದ್ದ ಪೌಲಿನಿ, ಮೊದಲ ಬಾರಿಗೆ ವಿಂಬಲ್ಡನ್‌ ಪ್ರವೇಶಿಸಿ ಸಂಭ್ರಮಿಸಿದರು. 2 ತಿಂಗಳ ಹಿಂದೆ ಫ್ರೆಂಚ್‌ ಓಪನ್‌ ಫೈನಲ್‌ನಲ್ಲಿ ಇಗಾ ಸ್ವಿಯಾಟೆಕ್‌ ವಿರುದ್ಧ ಸೋಲುಂಡಿದ್ದ ಪೌಲಿನಿ, ಚೊಚ್ಚಲ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಎತ್ತಿಹಿಡಿಯಲು ಕಾತರಿಸುತ್ತಿದ್ದಾರೆ. ಮಹಿಳಾ ಸಿಂಗಲ್ಸ್‌ ಫೈನಲ್‌ ಶನಿವಾರ ನಡೆಯಲಿದೆ.

ಒಂದೇ ವರ್ಷ ಫ್ರೆಂಚ್‌ ಓಪನ್‌, ವಿಂಬಲ್ಡನ್‌ ಫೈನಲ್‌ ಪ್ರವೇಶ!

ಒಂದೇ ವರ್ಷದಲ್ಲಿ ಫ್ರೆಂಚ್‌ ಓಪನ್‌ ಹಾಗೂ ವಿಂಬಲ್ಡನ್‌ ಎರಡೂ ಗ್ರ್ಯಾನ್‌ಸ್ಲಾಂಗಳ ಫೈನಲ್‌ ಪ್ರವೇಶಿಸಿದ 4ನೇ ಆಟಗಾರ್ತಿ ಎನ್ನುವ ಹಿರಿಮೆಗೆ ಪೌಲಿನಿ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಸೆರೆನಾ ವಿಲಿಯಮ್ಸ್‌ (2002, 2015, 2016), ವೀನಸ್‌ ವಿಲಿಯಮ್ಸ್‌ (2002), ಜಸ್ಟಿನ್‌ ಹೆನಿನ್‌ (2006) ಈ ಸಾಧನೆ ಮಾಡಿದ್ದರು.