ಸಾರಾಂಶ
ನವದೆಹಲಿ: 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಮಹಿಳಾ ಟೇಬಲ್ ಟೆನಿಸ್ ತಂಡ ಕ್ವಾಟರ್ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕನ್ನಡತಿ ಅರ್ಚನಾ ಕಾಮತ್, ಕಿರಿಯ ವಯಸ್ಸಿನಲ್ಲಿಯೇ ಒಲಿಂಪಿಕ್ಸ್‌ಗೆ ವಿದಾಯ ಘೋಷಿಸಿದ್ದಾರೆ.
ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಕಾರಣದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಅರ್ಚನಾ ಮಾಹಿತಿ ನೀಡಿದ್ದಾರೆ.ಇದೇ ವೇಳೆ ಭಾರತದಲ್ಲಿ ಟೇಬಲ್ ಟೆನಿಸ್ ಅನ್ನು ವೃತ್ತಿಯಾಗಿ ಸ್ವೀಕರಿಸುವುದು ಆರ್ಥಿಕವಾಗಿ ಉತ್ತಮ ನಿರ್ಧಾರವಲ್ಲ ಎಂಬ ಕಾರಣಕ್ಕೆ ವಿದಾಯ ಹೇಳುತ್ತಿರುವುದಾಗಿ ಮತ್ತು ಜಾಗತಿಕ ಟಾಪ್ 100ರ ಪಟ್ಟಿಯಲ್ಲಿ ಇಲ್ಲದ ಕಾರಣ ಮುಂದಿನ ಒಲಿಂಪಿಕ್ಸ್‌ನಲ್ಲೂ ಪದಕ ಗೆಲ್ಲುವ ಸಾಧ್ಯತೆ ಇಲ್ಲ ಎನ್ನುವ ಕಾರಣಕ್ಕೆ ವಿದಾಯ ಹೇಳಿದ್ದಾಗಿ ಬಂದ ವರದಿಗಳನ್ನು ಅರ್ಚನಾ ತಿರಸ್ಕರಿಸಿದ್ದಾರೆ.
ಈ ನಿರ್ಧಾರ ಸಂಪೂರ್ಣವಾಗಿ ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದ್ದು. ಕಳೆದ 15 ವರ್ಷಗಳಲ್ಲಿ ನನಗೆ ಹಣಕಾಸು ಸೇರಿದಂತೆ ಎಲ್ಲಾ ರೀತಿಯಲ್ಲಿ ಅತ್ಯುತ್ತಮ ಬೆಂಬಲ ಸಿಕ್ಕಿದೆ. ಅದಕ್ಕೆ ನಾನು ಕೃತಜ್ಞಳಾಗಿದ್ದಾನೆ ಎಂದು ಅರ್ಚನಾ ಹೇಳಿದ್ದಾರೆ.ಓದಿನಲ್ಲಿಯೂ ಮುಂದಿರುವ ಅರ್ಚನಾ, ಅರ್ಥಶಾಸ್ತ್ರದಲ್ಲಿ ಪದವಿ ಪೂರೈಸಿದ್ದು, ಅಂತರಾಷ್ಟ್ರೀಯ ಸಂಬಂಧ, ಸ್ಟ್ರಾಟೆಜಿ ಮತ್ತು ಸೆಕ್ಯೂರಿಟಿ ವಿಚಾರದಲ್ಲಿ ಉನ್ನತ ವ್ಯಾಸಂಗಕ್ಕೆ ನಿರ್ಧರಿಸಿದ್ದಾರೆ.