ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭಕ್ಕಾಗಿ 5+ ಗಂಟೆ ನಿಂತೇ ಇದ್ದ ಭಾರತದ ಅಥ್ಲೀಟ್‌ಗಳು

| Published : Jul 27 2024, 12:59 AM IST / Updated: Jul 27 2024, 04:07 AM IST

ಸಾರಾಂಶ

ಅಥ್ಲೀಟ್‌ಗಳು ಆಯಾಸಗೊಳ್ಳದಿರಲು ಆಯೋಜಕರು ಹಣ್ಣು, ಬಿಸ್ಕತ್‌, ಡ್ರೈ ಫ್ರೂಟ್ಸ್‌, ಪೌಷ್ಟಿಕಾಂಶವಿರುವ ಉತ್ಪನ್ನಗಳನ್ನು ನೀಡಿದರು. ಜೊತೆಗೆ ಬೋಟ್‌ ಸಂಚಾರದ ಹಿನ್ನೆಲೆಯಲ್ಲಿ ಲೈಫ್‌ ಜಾಕೆಟ್‌ಗಳನ್ನೂ ನೀಡಲಾಗಿತ್ತು.

ಪ್ಯಾರಿಸ್‌ : ಶುಕ್ರವಾರ ಪ್ಯಾರಿಸ್‌ ನಗರದ ಸೀನ್‌ ನದಿ ಮೇಲೆ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭ ನೆರವೇರಿತು. ಆದರೆ ಇದಕ್ಕಾಗಿ ಅಥ್ಲೀಟ್‌ಗಳು ಬರೋಬ್ಬರಿ 5 ಗಂಟೆಗೂ ಹೆಚ್ಚು ಕಾಲ ನಿಂತೇ ಇರಬೇಕಾಯಿತು. ಮಧ್ಯಾಹ್ನವೇ ಕ್ರೀಡಾ ಗ್ರಾಮದಿಂದ ಹೊರಟಿದ್ದ ಅಥ್ಲೀಟ್‌ಗಳು ಸಮಾರಂಭದ ವೇಳೆ 45 ನಿಮಿಷಗಳ ಕಾಲ ಬೋಟ್‌ನಲ್ಲಿದ್ದರು. 

ಉಳಿದ ಸಮಯ ಅವರು ನಿಂತೇ ಇರಬೇಕಾಯಿತು. ಇನ್ನು, ಅಥ್ಲೀಟ್‌ಗಳು ಆಯಾಸಗೊಳ್ಳದಿರಲು ಆಯೋಜಕರು ಹಣ್ಣು, ಬಿಸ್ಕತ್‌, ಡ್ರೈ ಫ್ರೂಟ್ಸ್‌, ಪೌಷ್ಟಿಕಾಂಶವಿರುವ ಉತ್ಪನ್ನಗಳನ್ನು ನೀಡಿದರು. ಜೊತೆಗೆ ಬೋಟ್‌ ಸಂಚಾರದ ಹಿನ್ನೆಲೆಯಲ್ಲಿ ಲೈಫ್‌ ಜಾಕೆಟ್‌ಗಳನ್ನೂ ನೀಡಲಾಗಿತ್ತು.

ಒಲಿಂಪಿಕ್ಸ್‌ನಲ್ಲಿ ಮೊದಲ ಡೋಪ್‌ ಪತ್ತೆ: ಇರಾಕ್‌ನ ಜುಡೋ ಸ್ಪರ್ಧಿ ಸಸ್ಪೆಂಡ್‌

ಪ್ಯಾರಿಸ್‌: ಈ ಬಾರಿ ಒಲಿಂಪಿಕ್ಸ್‌ನಲ್ಲಿ ಮೊದಲ ಡೋಪಿಂಗ್‌ ಪ್ರಕರಣ ಪತ್ತೆಯಾಗಿದೆ. ನಿಷೇಧಿತ ಪದಾರ್ಥ ಸೇವಿಸಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ ಇರಾಕ್‌ನ ಜುಡೋ ಸ್ಪರ್ಧಿ ಸಜ್ಜಾದ್‌ ಸೆಹೆನ್‌ರನ್ನು ಅಂತಾರಾಷ್ಟ್ರೀಯ ಟೆಸ್ಟಿಂಗ್‌ ಏಜೆನ್ಸಿ(ಐಟಿಎ) ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಜುಡೋ ಸ್ಪರ್ಧೆಯ 81 ಕೆ.ಜಿ. ವಿಭಾಗದಲ್ಲಿ ಸಜ್ಜಾದ್‌ ಸ್ಪರ್ಧಿಸಬೇಕಿತ್ತು. ಆದರೆ ಮಂಗಳವಾರ ಅವರಿಂದ ಸಂಗ್ರಹಿಸಲಾದ ಮೂತ್ರದ ಮಾದರಿಯಲ್ಲಿ ನಿಷೇಧಿತ ಅನಾಬೊಲಿಕ್‌ ಸ್ಟೆರಾಯ್ಡ್‌ ಪತ್ತೆಯಾದ ಕಾರಣ ಅಮಾನತುಗೊಂಡಿದ್ದಾರೆ. ಅವರ ವಿರುದ್ಧ ತನಿಖೆ ಕೈಗೊಳ್ಳಲಾಗಿದ್ದು, ಸದ್ಯದ ಮಟ್ಟಿಗೆ ತರಬೇತಿ, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದನ್ನು ತಡೆ ಹಿಡಿಯಲಾಗಿದೆ.

ಡ್ರೋನ್‌ ವಿವಾದ: ಕೆನಡಾ ಫುಟ್ಬಾಲ್‌ ಕೋಚ್‌ ವಜಾ

ಪ್ಯಾರಿಸ್‌: ಒಲಿಂಪಿಕ್ಸ್‌ಗಾಗಿ ನ್ಯೂಜಿಲೆಂಡ್‌ ಮಹಿಳಾ ತಂಡ ಅಭ್ಯಾಸ ನಡೆಸುತ್ತಿದ್ದಾಗ ಡ್ರೋನ್‌ ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಮಹಿಳಾ ಫುಟ್ಬಾಲ್‌ ತಂಡದ ಕೋಚ್‌ ವಜಾಗೊಂಡಿದ್ದಾರೆ. ಕೋಚ್‌ ಬೆವ್‌ ಪ್ರೀಸ್ಟ್‌ಮನ್‌ರನ್ನು ಹುದ್ದೆಯಿಂದ ಕೆಳಗಿಳಿಸಿದ್ದಾಗಿ ಕೆನಡಾ ಒಲಿಂಪಿಕ್ಸ್‌ ಸಮಿತಿ ತಿಳಿಸಿದೆ. ಈಗಾಗಲೇ ತಂಡದ ಸಹಾಯಕ ಕೋಚ್‌ ಜ್ಯಾಸ್ಮಿನ್‌ ಮಂಡೆರ್‌, ವಿಶ್ಲೇಷಕ ಜೋಸೆಫ್‌ ಲಾಂಬಾರ್ಡಿ ಅವರನ್ನು ಮನೆಗೆ ಕಳುಹಿಸಲಾಗಿತ್ತು. ಇತ್ತೀಚೆಗೆ ನ್ಯೂಜಿಲೆಂಡ್‌ ಆಟಗಾರ್ತಿಯರು ತಮ್ಮ ಅಭ್ಯಾಸದ ವೇಳೆ ಡ್ರೋನ್‌ ಹಾರಾಡುತ್ತಿರುವುದು ಕಂಡುಬಂದಾಗ ಆಯೋಜಕರಿಗೆ ದೂರು ನೀಡಿದ್ದರು. ಅಧಿಕಾರಿಗಳು ತಕ್ಷಣ ಡ್ರೋನ್‌ ಹಾಗೂ ಕೆನಡಾ ತಂಡದ ಸಿಬ್ಬಂದಿಯೊಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದರು.