ಸಾರಾಂಶ
ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ನಡೆಯುವ ಪಥಸಂಚಲನದಲ್ಲಿ ಭಾರತದ ಧ್ವಜವನ್ನು ಹಿಡಿದು ಅಚಂತ ಶರತ್ ಕಮಲ್ ಮುನ್ನಡೆಯಲಿದ್ದಾರೆ. ತಂಡದ ಮುಖ್ಯಸ್ಥೆಯಾಗಿ ಮೇರಿ ಕೋಮ್‌ರನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ನೇಮಕ ಮಾಡಿದೆ.
ನವದೆಹಲಿ: ಹಿರಿಯ ಟೇಬಲ್ ಟೆನಿಸ್ ಆಟಗಾರ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಶರತ್ ಕಮಲ್ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಧ್ವಜಧಾರಿಯಾಗಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಶರತ್, ಭಾರತದ ಧ್ವಜ ಹಿಡಿದು ಇಡೀ ತಂಡವನ್ನು ಮುನ್ನಡೆಸಲಿದ್ದಾರೆ.
ಇನ್ನು 6 ಬಾರಿ ವಿಶ್ವ ಚಾಂಪಿಯನ್, ಒಲಿಂಪಿಕ್ಸ್ ಪದಕ ವಿಜೇತ ದಿಗ್ಗಜ ಬಾಕ್ಸರ್ ಮೇರಿ ಕೋಮ್, ಭಾರತ ತಂಡದ ಮುಖ್ಯಸ್ಥೆ (ಚೀಫ್ ಡೆ ಮಿಷನ್) ಆಗಿ ನೇಮಕಗೊಂಡಿದ್ದಾರೆ. ಚಳಿಗಾಲದ ಕ್ರೀಡೆಯಾದ ಲ್ಯೂಜ್‌ನಲ್ಲಿ ಹಲವು ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಶಿವ ಕೇಶವನ್ ಉಪ-ಮುಖ್ಯಾಧಿಕಾರಿಯಾಗಿ ಪ್ಯಾರಿಸ್‌ಗೆ ತೆರಳಲಿದ್ದಾರೆ ಎಂದು ಭಾರತ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷೆ ಪಿ.ಟಿ.ಉಷಾ ತಿಳಿಸಿದ್ದಾರೆ.ಭಾರತ ಶೂಟಿಂಗ್ ತಂಡದ ಮೇಲುಸ್ತುವಾರಿಯನ್ನು ಮಾಜಿ ಒಲಿಂಪಿಕ್ಸ್ ಪದಕ ವಿಜೇತ ಶೂಟರ್ ಗಗನ್ ನಾರಂಗ್‌ಗೆ ವಹಿಸಲಾಗಿದೆ. ಪ್ಯಾರಿಸ್‌ನಲ್ಲಿ ಶೂಟಿಂಗ್ ರೇಂಜ್ ನಗರದಿಂದ ಬಹಳ ದೂರದಲ್ಲಿದ್ದು, ಸ್ಪರ್ಧೆಯ ವೇಳೆ ಸಾಕಷ್ಟು ಸಮನ್ವಯದ ಅಗತ್ಯವಿರುವ ಕಾರಣ ಅನುಭವಿ ಗಗನ್ ನಾರಂಗ್‌ಗೆ ಜವಾಬ್ದಾರಿ ವಹಿಸಲಾಗಿದೆ ಎಂದು ಪಿ.ಟಿ.ಉಷಾ ಹೇಳಿದ್ದಾರೆ.