ರಾಜ್ಯಸಭೆಯಲ್ಲೂ ಕ್ರೀಡಾಆಡಳಿತ ಮಸೂದೆ ಪಾಸ್‌

| Published : Aug 13 2025, 12:30 AM IST

ಸಾರಾಂಶ

ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ ಲೋಕಸಭೆಯಲ್ಲಿ ಅನುಮೋದನೆ ಪಡೆದ 24 ಗಂಟೆಗಳಲ್ಲೇ ರಾಜ್ಯಸಭೆಯಲ್ಲೂ ಪಾಸಾಗಿದೆ. ರಾಷ್ಟ್ರೀಯ ಉದ್ದೀಪನ ನಿಗ್ರಹ (ತಿದ್ದುಪಡಿ) ಮಸೂದೆ ಸಹ ಪಾಸಾಗಿದ್ದು, ಎರಡೂ ಮಸೂದೆಗಳು ರಾಷ್ಟ್ರಪತಿಗಳಿಂದ ಅಂಗೀಕಾರಗೊಳ್ಳುವುದು ಬಾಕಿ ಇದೆ.

- ಮಸೂದೆಗೆ ರಾಷ್ಟ್ರಪತಿಗಳ ಅಂಗೀಕಾರ ಬಾಕಿ ನವದೆಹಲಿ: ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ ಲೋಕಸಭೆಯಲ್ಲಿ ಅನುಮೋದನೆ ಪಡೆದ 24 ಗಂಟೆಗಳಲ್ಲೇ ರಾಜ್ಯಸಭೆಯಲ್ಲೂ ಪಾಸಾಗಿದೆ. ರಾಷ್ಟ್ರೀಯ ಉದ್ದೀಪನ ನಿಗ್ರಹ (ತಿದ್ದುಪಡಿ) ಮಸೂದೆ ಸಹ ಪಾಸಾಗಿದ್ದು, ಎರಡೂ ಮಸೂದೆಗಳು ರಾಷ್ಟ್ರಪತಿಗಳಿಂದ ಅಂಗೀಕಾರಗೊಳ್ಳುವುದು ಬಾಕಿ ಇದೆ.

ಕೇಂದ್ರ ಕ್ರೀಡಾ ಸಚಿವ ಮನ್‌ಸುಖ್‌ ಮಾಂಡವೀಯ ಮಂಗಳವಾರ ಮಧ್ಯಾಹ್ನ ಮೇಲ್ಮನೆಯಲ್ಲಿ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯನ್ನು ಮಂಡಿಸಿದರು. ‘20 ದೇಶಗಳಲ್ಲಿ ಕ್ರೀಡಾ ನೀತಿ ಇದೆ. ಭಾರತವನ್ನು 21ನೇ ದೇಶವನ್ನಾಗಿಸಬೇಕು ಎಂದು ರಾಜ್ಯಸಭೆಗೆ ಮನವಿ ಮಾಡುತ್ತೇನೆ’ ಎಂದು ಮಾಂಡವೀಯ ತಮ್ಮ ಮಾತು ಆರಂಭಿಸಿದರು. ಮಸೂದೆ ಸಂಬಂಧಿಸಿ ಸುಮಾರು 2 ಗಂಟೆಗಳ ಕಾಲ ಚರ್ಚೆ ನಡೆಯಿತು.

ಚರ್ಚೆ ವೇಳೆ ಬಿಜೆಡಿ ಸಂಸದ ಶುಭಾಶಿಷ್‌ ಕುಂತಿಯಾ, ಕ್ರೀಡಾ ಆಡಳಿತ ಮಸೂದೆಯು ಕೆಲ ಸಮಸ್ಯೆಗಳನ್ನು ಒಳಗೊಂಡಿರುವುದಾಗಿ ತಿಳಿಸಿದರು. ಮಸೂದೆಯು ಕ್ರೀಡಾಪಟುಗಳಿಗೆ ಪೂಕರವಾಗಿರಬೇಕೇ ಹೊರತು ಅವರನ್ನು ನಿಯಂತ್ರಿಸಬಾರದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಂಡವೀಯ, ‘ಕ್ರೀಡಾಪಟುಗಳಿಗೆ ಏನು ನೆರವು ಬೇಕೋ ಅದನ್ನು ಒದಗಿಸುವುದಷ್ಟೇ ಸರ್ಕಾರದ ಕೆಲಸ. ಸರ್ಕಾರವು ಯಾರನ್ನೂ ನಿಯಂತ್ರಿಸಲು ಇಚ್ಛಿಸುವುದಿಲ್ಲ. ಕ್ರೀಡಾ ಆಡಳಿತದಲ್ಲಿ ಪಾರದರ್ಶಕತೆ ತರಬೇಕು ಎನ್ನುವುದೇ ನಮ್ಮ ಉದ್ದೇಶ’ ಎಂದರು.

ಭಾರತೀಯ ಫುಟ್ಬಾಲ್‌ ಫೆಡರೇಶನ್‌ನ ಮಾಜಿ ಅಧ್ಯಕ್ಷ, ಎನ್‌ಸಿಪಿ ನಾಯಕ ಪ್ರಫುಲ್‌ ಪಟೇಲ್‌, ಭಾರತೀಯ ಒಲಿಂಪಿಕ್‌ ಸಂಸ್ಥೆಯ ಅಧ್ಯಕ್ಷೆ, ರಾಜ್ಯಸಭೆ ಸದಸ್ಯೆ ಪಿ.ಟಿ.ಉಷಾ, ಕ್ರೀಡಾ ಆಡಳಿತ ಮಸೂದೆ ಪರವಾಗಿ ಮಾತನಾಡಿದರು.