ಸಚಿನ್‌ಗೆ ₹2.15 ಕೋಟಿ ಜಾಕ್‌ಪಾಟ್‌ : ಪ್ರೊ ಕಬಡ್ಡಿಯ 2ನೇ ದುಬಾರಿ ಭಾರತೀಯ ಆಟಗಾರ ಖ್ಯಾತಿ

| Published : Aug 16 2024, 12:49 AM IST / Updated: Aug 16 2024, 04:26 AM IST

ಸಾರಾಂಶ

ತಮಿಳ್‌ ತಲೈವಾಸ್‌ಗೆ ಬಿಕರಿಯಾದ ಸಚಿನ್‌. ₹1.7 ಕೋಟಿ ನೀಡಿ ಪವನ್‌ರನ್ನು ತನ್ನಲ್ಲೇ ಉಳಿಸಿಕೊಂಡ ಟೈಟಾನ್ಸ್. ಬೆಂಗಳೂರು ಬುಲ್ಸ್‌ನಲ್ಲಿದ್ದ ಭರತ್‌ ಯುಪಿ ತೆಕ್ಕೆಗೆ. ಪರ್ದೀಪ್‌ ನರ್ವಾಲ್‌ರನ್ನು ಖರೀದಿಸಿದ ಬೆಂಗಳೂರು.

ಮುಂಬೈ: ತಾರಾ ರೈಡರ್‌ ಸಚಿನ್‌ ತನ್ವಾರ್‌ ಪ್ರೊ ಕಬಡ್ಡಿ ಇತಿಹಾಸದಲ್ಲೇ 2ನೇ ಅತಿ ದುಬಾರಿ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. 

ಗುರುವಾರ 11ನೇ ಆವೃತ್ತಿಯ ಪ್ರೊ ಕಬಡ್ಡಿ ಹರಾಜಿನಲ್ಲಿ 25 ವರ್ಷದ ಸಚಿನ್‌ರನ್ನು ತಮಿಳ್‌ ತಲೈವಾಸ್‌ ತಂಡ ಬರೋಬ್ಬರಿ 2.15 ಕೋಟಿ ರು. ನೀಡಿ ತನ್ನ ತೆಕ್ಕೆಗೆ ಪಡೆದುಕೊಂಡಿತು.

ಕಳೆದ ವರ್ಷ ಪವನ್‌ ಶೆರಾವತ್‌ರನ್ನು ತೆಲುಗು ಟೈಟಾನ್ಸ್ ತಂಡ 2.6 ಕೋಟಿ ರು. ನೀಡಿ ಖರೀದಿಸಿತ್ತು. ಪ್ರೊ ಕಬಡ್ಡಿಯ ದುಬಾರಿ ಆಟಗಾರ ಎನಿಸಿಕೊಂಡಿರುವ ಪವನ್‌ರನ್ನು ಈ ಬಾರಿ ಟೈಟಾನ್ಸ್‌ ತಂಡ ಹರಾಜಿಗೂ ಮುನ್ನ ಕೈಬಿಟ್ಟಿತ್ತು. 

ಆದರೆ ಹರಾಜಿನಲ್ಲಿ ಅವರನ್ನು ಟೈಟಾನ್ಸ್‌ ತಂಡ ಎಫ್‌ಬಿಎಂ(ಫೈನಲ್‌ ಬಿಡ್‌ ಮ್ಯಾಚ್‌) ಕಾರ್ಡ್‌ ಬಳಸಿ ತನ್ನಲ್ಲೇ ಉಳಿಸಿಕೊಂಡಿತು. ಅವರು ಈ ಬಾರಿ ₹1.725 ಕೋಟಿಗೆ ಬಿಕರಿಯಾದರು. 

ಇದೇ ವೇಳೆ ಇರಾನ್‌ನ ತಾರಾ ಆಲ್ರೌಂಡರ್‌ ಮೊಹಮದ್‌ ರೆಜಾ ಶಾದ್ಲೂ 2.07 ಕೋಟಿ ರು.ಗೆ ಹರ್ಯಾಣ ಸ್ಟೀಲರ್ಸ್‌ ಪಾಲಾದರು. ಕಳೆದ ವರ್ಷ ಅವರನ್ನು ಪುಣೇರಿ ಪಲ್ಟನ್‌ ತಂಡ ₹2.35 ಕೋಟಿ ರು. ನೀಡಿ ಖರೀದಿಸಿತ್ತು. 

ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ, ತಂಡ ಅವರನ್ನು ಹರಾಜಿಗೂ ಮುನ್ನ ಕೈಬಿಟ್ಟಿತ್ತು.ಇನ್ನು, ತಾರಾ ರೈಡರ್ ಗುಮಾನ್‌ ಸಿಂಗ್ ಗುಜರಾತ್‌ ಜೈಂಟ್ಸ್‌ ತಂಡಕ್ಕೆ 1.97 ಕೋಟಿಗೆ ಹರಾಜಾದರೆ, ಕಳೆದ ಕೆಲ ಆವೃತ್ತಿಗಳಲ್ಲಿ ಬೆಂಗಳೂರು ಬುಲ್ಸ್‌ನ ಪ್ರಮುಖ ಆಟಗಾರನಾಗಿದ್ದ ಭರತ್‌ ಹೂಡಾ ಅವರನ್ನು ಯುಪಿ ಯೋಧಾಸ್‌ ತಂಡ 1.30 ಕೋಟಿ ರು. ನೀಡಿ ತನ್ನ ತೆಕ್ಕೆಗೆ ಪಡೆದುಕೊಂಡಿತು.

ಮಣೀಂದರ್‌ ಸಿಂಗ್‌(1.15 ಕೋಟಿ ರು.)ರನ್ನು ಬೆಂಗಾಲ್‌ ವಾರಿಯರ್ಸ್‌ ತಂಡ ಫೈನಲ್‌ ಬಿಡ್‌ ಮ್ಯಾಚ್‌ ಕಾರ್ಡ್‌ ಬಳಸಿ ತನ್ನಲ್ಲೇ ಉಳಿಸಿಕೊಂಡಿತು. ಡಿಫೆಂಡರ್‌ಗಳಾದ ಸುನಿಲ್‌ ಕುಮಾರ್‌ ₹1.015 ಕೋಟಿಗೆ ಯು ಮುಂಬಾ ಪಾಲಾದರೆ, ಕೃಷನ್‌ ತೆಲುಗು ಟೈಟಾನ್ಸ್‌ಗೆ ₹70 ಲಕ್ಷಕ್ಕೆ, ಫಜಲ್‌ ಅಟ್ರಾಚಲಿ ₹50 ಲಕ್ಷಕ್ಕೆ ಬೆಂಗಾಲ್‌ ವಾರಿಯರ್ಸ್‌ಗೆ ಬಿಕರಿಯಾದರು. 

ಟಾಪ್‌-5 ದುಬಾರಿ ಆಟಗಾರರು

ಆಟಗಾರ ಮೊತ್ತ(ಕೋಟಿ ರು.ಗಳಲ್ಲಿ)

ತಂಡ 

ಸಚಿನ್‌ 2.15 ತಲೈವಾಸ್‌ 

ಶಾದ್ಲೂ2.07 ಹರ್ಯಾಣ 

ಗುಮಾನ್‌1.97

ಗುಜರಾತ್‌ ಪವನ್‌1.72

ಟೈಟಾನ್ಸ್‌ ಭರತ್‌1.30 ಯುಪಿ