ಸಾರಾಂಶ
ನವದೆಹಲಿ: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಜೊತೆ ಬುಧವಾರ ರಾಷ್ಟ್ರಪತಿ ಭವನದ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಭಾರತದ ದಿಗ್ಗಜ ಶಟ್ಲರ್ ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್ ಆಡಿದರು.
ಗುರುವಾರ ರಾಷ್ಟ್ರಪತಿ ಭವನದಲ್ಲಿ ಸಂವಾದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಸೈನಾರನ್ನು ಆಹ್ವಾನಿಸಲಾಗಿತ್ತು. ಬ್ಯಾಡ್ಮಿಂಟನ್ ಆಡುತ್ತಿರುವ ಫೋಟೋಗಳನ್ನು ರಾಷ್ಟ್ರಪತಿ, ಸೈನಾ ಇಬ್ಬರೂ ಸಾಮಾಜಿಕ ತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.
ಬ್ಯಾಡ್ಮಿಂಟನ್‌ಗಿಂತ ಟೆನಿಸ್ಸಲ್ಲಿ ನಾನು ಹೆಚ್ಚು ಯಶಸ್ಸು ಕಾಣುತ್ತಿದ್ದೆ: ಸೈನಾ
ನವದೆಹಲಿ: ಒಲಿಂಪಿಕ್ ಪದಕ ವಿಜೇತ ಭಾರತೀಯ ಶಟ್ಲರ್ ಸೈನಾ ನೆಹ್ವಾಲ್, ತಾವು ಬ್ಯಾಡ್ಮಿಂಟನ್ ಬದಲು ಟೆನಿಸ್ ಆಟಗಾರ್ತಿಯಾಗಿದ್ದರೆ ಹೆಚ್ಚು ಯಶಸ್ಸು ಸಿಗುತ್ತಿತ್ತು ಎಂದಿದ್ದಾರೆ.
ಗುರುವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಂವಾದದಲ್ಲಿ ಸೈನಾ, ‘ನನ್ನ ತಂದೆ ತಾಯಿ ನನ್ನನ್ನು ಬ್ಯಾಡ್ಮಿಂಟನ್‌ಗಿಂತ ಟೆನಿಸ್ ತರಬೇತಿಗೆ ಸೇರಿಸಿದ್ದರೆ ಚೆನ್ನಾಗಿರುತ್ತಿತ್ತು ಎನಿಸುತ್ತದೆ. ಟೆನಿಸ್‌ನಲ್ಲಿ ಹೆಚ್ಚಿನ ಹಣವಿದೆ. ನನ್ನಲ್ಲಿ ಹೆಚ್ಚಿನ ಬಲವಿದ್ದು, ಬ್ಯಾಡ್ಮಿಂಟನ್‌ಗಿಂತ ಟೆನಿಸ್‌ನಲ್ಲಿ ಹೆಚ್ಚು ಯಶಸ್ಸು ಕಾಣುತ್ತಿದ್ದೆ ಎಂದು ಹಲವು ಬಾರಿ ಅನಿಸಿದೆ’ ಎಂದರು.