ಸಾರಾಂಶ
ನವದೆಹಲಿ: ಎರಡು ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ಸದ್ದಿಲ್ಲದೇ ಮದುವೆಯಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಇದೀಗ ನೀರಜ್ ಮದುವೆ ವಿಚಾರಗಳೇ ಹೆಚ್ಚು ಸದ್ದು ಮಾಡುತ್ತಿದ್ದು, ಮಾಧ್ಯಮಗಳಿಗೆ ವಿಷಯ ತಿಳಿಯದಂತೆ ನೀರಜ್ ಮದುವೆ ಸಿದ್ಧತೆಗಳು ಹೇಗಿತ್ತು ಅನ್ನೋ ಬಗ್ಗೆ ಹೆಚ್ಚು ಚರ್ಚೆಗಳಾಗುತ್ತಿವೆ.
ಈ ನಡುವೆ ನೀರಜ್‌ರ ಚಿಕ್ಕಪ್ಪ ಭೀಮ್ ಚೋಪ್ರಾ ಮದುವೆ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ‘ನೀರಜ್ ಮತ್ತು ಹಿಮಾನಿ ಇಬ್ಬರೂ ಎರಡು ವರ್ಷದ ಹಿಂದೆ ಪರಿಚಯಗೊಂಡಿದ್ದರು. ಮದುವೆ ಸಿದ್ಧತೆ ಕೆಲ ತಿಂಗಳುಗಳ ಹಿಂದೆಯೇ ಶುರುವಾಗಿದ್ದರೂ, 2 ಕುಟುಂಬಗಳ ಸದಸ್ಯರ ಸಮ್ಮುಖದಲ್ಲಿ ಮಾತ್ರ ಮದುವೆ ನಡೆಯಬೇಕು ಎನ್ನುವುದು ಕುಟುಂಬಸ್ಥರ ಬಯಕೆ ಆಗಿತ್ತು.
ಹೀಗಾಗಿ ಅಭಿಮಾನಿಗಳು, ಆಪ್ತ ಕ್ರೀಡಾಪಟುಗಳಿಂದಲೂ ಮದುವೆ ವಿಚಾರ ಮುಚ್ಚಿಡಲಾಗಿತ್ತು. ಬಳಿಕ ಕುಟುಂಬದ ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿದೆ. ಸದ್ಯ ದಂಪತಿಗಳು ಭಾರತದಲ್ಲಿಲ್ಲ’ ಎಂದಿದ್ದಾರೆ. ಇನ್ನು ಭಾರತ ಅಥ್ಲೆಟಿಕ್ಸ್ ಸಂಸ್ಥೆಗೆ ನೀರಜ್ ಮದುವೆ ವಿಚಾರ ತಿಳಿಸಿದ್ದರೂ, ಯಾರೂ ಮಾಹಿತಿ ಹೊರಬಿಟ್ಟಿರಲಿಲ್ಲ.
ಸಿಂಗಾಪುರ ಬ್ಯಾಡ್ಮಿಂಟನ್ ತಂಡಕ್ಕೆ ಕನ್ನಡಿಗ ಅನೂಪ್ ಕೋಚ್
ಸಿಂಗಾಪುರ: ಏಷ್ಯನ್ ಚಾಂಪಿಯನ್‌ಶಿಪ್ ಕಂಚು ವಿಜೇತ ಭಾರತೀಯ ಶಟ್ಲರ್, ಬೆಂಗಳೂರಿನ ಅನೂಪ್ ಶ್ರೀಧರ್ ಅವರನ್ನು ಸಿಂಗಾಪುರ ಬ್ಯಾಡ್ಮಿಂಟನ್ ಸಂಸ್ಥೆ(ಎಸ್‌ಬಿಎ) ತನ್ನ ತಂಡದ ಹೆಚ್ಚುವರಿ ಸಿಂಗಲ್ಸ್ ಕೋಚ್ ಆಗಿ ನೇಮಕ ಮಾಡಿದೆ. ಅನೂಪ್ ನೇಮಕದ ಬಗ್ಗೆ ಎಸ್‌ಬಿಎ ಉಪಾಧ್ಯಕ್ಷ ಪ್ರೊ.ಡೇವಿಡ್ ಟಾನ್ ಮಾಹಿತಿ ನೀಡಿದ್ದು, ‘ವೀಸಾ ಪ್ರಕ್ರಿಯೆ ಮುಗಿದ ಬಳಿಕ ಅನೂಪ್ ಶೀಘ್ರದಲ್ಲಿಯೇ ನಮ್ಮ ತಂಡವನ್ನು ಸೇರಿಕೊಳ್ಳಲಿದ್ದಾರೆ’ ಎಂದಿದ್ದಾರೆ.
ಎಸ್‌ಬಿಎ ಹೆಚ್ಚುವರಿ ಸಿಂಗಲ್ಸ್ ಕೋಚ್ ನೇಮಕಕ್ಕೆ ಜಾಹೀರಾತು ನೀಡಿತ್ತು. ಅದಕ್ಕೆ ಸಂಬಂಧಿಸಿದಂತೆ ಎಲ್ಲ ಮಾನದಂಡಗಳನ್ನು ಪೂರೈಸಿರುವ ಕಾರಣ ಅನೂಪ್ ಆಯ್ಕೆಯಾಗಿದ್ದಾರೆ. ಅನೂಪ್ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಮಿಶ್ರ ತಂಡದಲ್ಲಿ ಕಂಚಿನ ಪದಕ ಗೆದ್ದಿದ್ದರು. 2006, 2008ರಲ್ಲಿ ಭಾರತದ ಥಾಮಸ್ ಕಪ್ ತಂಡದ ನಾಯಕರಾಗಿದ್ದರು.