ಪ್ರೊ ಕಬಡ್ಡಿಯ 1000ನೇ ಐತಿಹಾಸಿಕ ಪಂದ್ಯದಲ್ಲಿ ಬುಲ್ಸ್‌ಗೆ ಸೋಲು!

| Published : Jan 16 2024, 01:47 AM IST

ಪ್ರೊ ಕಬಡ್ಡಿಯ 1000ನೇ ಐತಿಹಾಸಿಕ ಪಂದ್ಯದಲ್ಲಿ ಬುಲ್ಸ್‌ಗೆ ಸೋಲು!
Share this Article
  • FB
  • TW
  • Linkdin
  • Email

ಸಾರಾಂಶ

ಜೈಪುರದಲ್ಲಿ ನಡೆದ ಪ್ರೊ ಕಬಡ್ಡಿಯ 1000ನೇ ಪಂದ್ಯ ಐತಿಹಾಸಿಕ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡ ಸೋಲು ಅನುಭವಿಸಿದೆ. ಬೆಂಗಾಲ್‌ ವಾರಿಯರ್ಸ್‌ ತಂಡ 29-35ರಲ್ಲಿ ಬುಲ್ಸ್‌ ತಂಡವನ್ನು ಸೋಲಿಸಿತು.

ಕನ್ನಡಪ್ರಭ ವಾರ್ತೆ ಜೈಪುರ

ಪ್ರೊ ಕಬಡ್ಡಿಯ 1000ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ಸೋಲುಂಡಿದೆ. ಸೋಮವಾರ ಇಲ್ಲಿನ ಸವಾಯ್‌ ಮಾನ್‌ಸಿಂಗ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ಬುಲ್ಸ್‌ 29-35 ಅಂಕಗಳ ಅಂತರದಲ್ಲಿ ಪರಾಭವಗೊಂಡಿತು. ಬುಲ್ಸ್‌ ಈ ಆವೃತ್ತಿಯಲ್ಲಿ 13 ಪಂದ್ಯಗಳಲ್ಲಿ 8 ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲೇ ಉಳಿದಿದೆ. ತಂಡದ ಪ್ಲೇ-ಆಫ್‌ ಹಾದಿ ಪಂದ್ಯದಿಂದ ಪಂದ್ಯಕ್ಕೆ ಕಠಿಣಗೊಳ್ಳುತ್ತಿದೆ. ಪಂದ್ಯದ ಆರಂಭದಲ್ಲೇ ದೊರೆತ ಮುನ್ನಡೆಯ ಲಾಭವೆತ್ತಲು ಬುಲ್ಸ್‌ ವಿಫಲವಾಯಿತು. 16ನೇ ನಿಮಿಷದಲ್ಲಿ ಆಲೌಟ್‌ ಆಗುವ ಮೂಲಕ 11-15ರ ಹಿನ್ನಡೆ ಕಂಡ ಬುಲ್ಸ್‌, ಮೊದಲಾರ್ಧದ ಮುಕ್ತಾಯಕ್ಕೆ 12-19ರಿಂದ ಹಿಂದೆ ಉಳಿಯಿತು. ದ್ವಿತೀಯಾರ್ಧದಲ್ಲಿ ಚೇತರಿಸಿಕೊಳ್ಳಲು ಬೆಂಗಳೂರು ತಂಡಕ್ಕೆ ಸಾಧ್ಯವಾಗಲಿಲ್ಲ. ಪ್ರಮುಖ ರೈಡರ್‌ ಭರತ್‌ ಒಟ್ಟು 10 ಅಂಕ ಗಳಿಸಿದರೂ ಪಂದ್ಯದ ಬಹುತೇಕ ಸಮಯ ಅಂಕಣದಿಂದ ಹೊರಗುಳಿದಿದ್ದು, ಬುಲ್ಸ್‌ ಸೋಲಿಗೆ ಪ್ರಮುಖ ಕಾರಣವೆನಿಸಿತು. ರೈಡರ್‌ಗಳಾದ ವಿಕಾಸ್‌ ಖಂಡೋಲಾ, ಸುಶೀಲ್‌ ಪರಿಣಾಮಕಾರಿಯಾಗಲಿಲ್ಲ. ಅನುಭವಿ ಡಿಫೆಂಡರ್‌ಗಳಾದ ಸುರ್ಜೀತ್‌ ಸಿಂಗ್‌ ಹಾಗೂ ರಣ್‌ ಸಿಂಗ್‌ ಪದೇಪದೇ ತಪ್ಪುಗಳನ್ನೆಸಗಿ ಬೆಂಗಾಲ್‌ಗೆ ಸುಲಭವಾಗಿ ಅಂಕಗಳನ್ನು ನೀಡಿದರು.

ದಿನದ ಮತ್ತೊಂದು ಪಂದ್ಯದಲ್ಲಿ ಜೈಪುರ 31-29 ಅಂಕಗಳಲ್ಲಿ ಯು ಮುಂಬಾ ವಿರುದ್ಧ ಜಯಿಸಿತು.

ಮಣೀಂದರ್‌ ದಾಖಲೆ!

ಮಣೀಂದರ್‌ ಸಿಂಗ್‌ ಪ್ರೊ ಕಬಡ್ಡಿಯ 1ನೇ ಹಾಗೂ 1000ನೇ ಪಂದ್ಯ ಎರಡರಲ್ಲೂ ಆಡಿದ ಏಕೈಕ ಆಟಗಾರ ಎನ್ನುವ ದಾಖಲೆ ಬರೆದರು. ಕಳೆದ ಕೆಲ ವರ್ಷಗಳಿಂದ ಬೆಂಗಾಲ್‌ ತಂಡದಲ್ಲಿರುವ ಮಣೀಂದರ್‌, ಮೊದಲ ಆವೃತ್ತಿಯಲ್ಲಿ ಜೈಪುರ ತಂಡದ ಸದಸ್ಯರಾಗಿದ್ದರು.

===