ಪ್ರೊ ಕಬಡ್ಡಿ: ತಮಿಳ್‌ ತಲೈವಾಸ್‌ ಕಿಚ್ಚಿಗೆ ಬೆದರಿದ ಪೈರೇಟ್ಸ್‌

| Published : Jan 17 2024, 01:47 AM IST

ಸಾರಾಂಶ

ಈ ಬಾರಿ ಟೂರ್ನಿಯಲ್ಲಿ ಪಾಟ್ನಾ 13 ಪಂದ್ಯಗಳಲ್ಲಿ 5 ಜಯದೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ತಲೈವಾಸ್‌ 13ರಲ್ಲಿ 4 ಜಯ, 9 ಸೋಲಿನೊಂದಿಗೆ 10ನೇ ಸ್ಥಾನದಲ್ಲಿದೆ. ತಾರಾ ರೈಡರ್‌ಗಳಾದ ಸಚಿನ್‌, ಮಂಜೀತ್‌ ವೈಫಲ್ಯ ಪಾಟ್ನಾವನ್ನು ಸೋಲಿನತ್ತ ನೂಕಿತು.

ಜೈಪುರ: 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಪಾಟ್ನಾ ಪೈರೇಟ್ಸ್‌ 7ನೇ ಸೋಲನುಭವಿಸಿದೆ. ಮಂಗಳವಾರಾ ತಮಿಳ್‌ ತಲೈವಾಸ್‌ ವಿರುದ್ಧ ಪಾಟ್ನಾಗೆ 25-41 ಅಂಕಗಳ ಸೋಲು ಎದುರಾಯಿತು.

ಸದ್ಯ ಪಾಟ್ನಾ 13 ಪಂದ್ಯಗಳಲ್ಲಿ 5 ಜಯದೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದು, ತಲೈವಾಸ್‌ 13ರಲ್ಲಿ 4 ಜಯ, 9 ಸೋಲಿನೊಂದಿಗೆ 10ನೇ ಸ್ಥಾನದಲ್ಲಿದೆ. ಆರಂಭದಿಂದಲೇ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದ ತಲೈವಾಸ್‌ಗೆ ಕೊನೆವರೆಗೂ ಪಾಟ್ನಾದಿಂದ ಹೆಚ್ಚೇನೂ ಪೈಪೋಟಿ ಎದುರಾಗಲಿಲ್ಲ. ಪಾಟ್ನಾದ ಸುಧಾಕರ್‌ 8 ಅಂಕ ಗಳಿಸಿದರೆ, ತಾರಾ ರೈಡರ್‌ಗಳಾದ ಸಚಿನ್‌(04), ಮಂಜೀತ್‌(04) ವೈಫಲ್ಯ ತಂಡವನ್ನು ಸೋಲಿನತ್ತ ನೂಕಿತು.

ಅತ್ತ ತಲೈವಾಸ್ ಪರ ಅಜಿಂಕ್ಯಾ ಪವಾರ್‌ ಸೂಪರ್‌-10 ಮೂಲಕ ತಂಡಕ್ಕೆ ಆಸರೆಯಾದರು. ಡಿಫೆಂಡರ್‌ಗಳಾದ ಅಭಿಷೇಕ್‌ 7, ಸಾಹಿಲ್‌ 5 ಅಂಕ ಸಂಪಾದಿಸಿದರು.

ಇಂದಿನ ಪಂದ್ಯಗಳು: ಡೆಲ್ಲಿ-ಗುಜರಾತ್, ರಾತ್ರಿ 8ಕ್ಕೆ, ಜೈಪುರ-ಹರ್ಯಾಣ, ರಾತ್ರಿ 9ಕ್ಕೆ

ಸಸ್ಪೆಂಡ್‌ ಪ್ರಶ್ನಿಸಿ ಕೋರ್ಟ್‌ ಮೊರೆ ಹೋಗಲ್ಲ: ಸಂಜಯ್‌

ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್‌(ಡಬ್ಲ್ಯುಎಫ್‌ಐ) ಮೇಲೆ ಹೇರಿರುವ ಅಮಾನತು ಪ್ರಶ್ನಿಸಿ ಈ ಮೊದಲ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದ ಸಂಸ್ಥೆಯ ಅಧ್ಯಕ್ಷ ಸಂಜಯ್‌ ಸಿಂಗ್‌, ಸದ್ಯಕ್ಕೆ ಕಾನೂನು ಹೋರಾಟದ ಬಗ್ಗೆ ಯೋಚಿಸುತ್ತಿಲ್ಲ ಎಂದಿದ್ದಾರೆ. ಈ ಬಗ್ಗೆ ಮಂಗಳವಾರ ಸಂಸ್ಥೆಯ ಪದಾಧಿಕಾರಿಗಳ ಜೊತೆಗಿನ ಸಭೆ ಬಳಿಕ ಮಾತನಾಡಿದ ಅವರು, ಅಮಾನತು ಬಗ್ಗೆ ಕೇಂದ್ರ ಕ್ರೀಡಾ ಸಚಿವಾಲಯದ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಲು ನಿರ್ಧರಿಸಿದ್ದೇವೆ. ಸರ್ಕಾರದ ಜೊತೆ ಮಾತುಕತೆಗೆ ಸಮಯ ಕೇಳಿದ್ದೇವೆ. ಮಾತುಕತೆ ವಿಫಲವಾದರೆ ಮಾತ್ರ ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದಿದ್ದಾರೆ.